ಸಂಪಿಗೆ ಟಾಕೀಸ್‌ ಮಾಲೀಕರ ಮನೆಗಳ್ಳತನ: ಮೂವರು ಬಂಧನ

| Published : Nov 13 2024, 01:31 AM IST

ಸಂಪಿಗೆ ಟಾಕೀಸ್‌ ಮಾಲೀಕರ ಮನೆಗಳ್ಳತನ: ಮೂವರು ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಸಂಪಿಗೆ ಚಿತ್ರಮಂದಿರ ಮಾಲೀಕರಿಗೆ ಮದ್ಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಸಂಪಿಗೆ ಚಿತ್ರಮಂದಿರ ಮಾಲೀಕರಿಗೆ ಮದ್ಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಪ್ರಕಾಶ್‌ ಶಾಹಿ(46), ಅಪೀಲ್‌ ಶಾಹಿ(41) ಹಾಗೂ ಜಗದೀಶ್‌ ಶಾಹಿ(30) ಬಂಧಿತರು. ಆರೋಪಿಗಳಿಂದ 1.6 ಕೆ.ಜಿ. ಚಿನ್ನಾಭರಣ ಹಾಗೂ 450 ಗ್ರಾಂ ಬೆಳ್ಳಿ ವಸ್ತುಗಳು ಸೇರಿ ಒಟ್ಟು 1.12 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ನೇಪಾಳ ಮೂಲದ ಗಣೇಶ್‌ ಮತ್ತು ಗೀತಾ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಪ್ರಕರಣದ ಹಿನ್ನೆಲೆ: ಸಂಪಿಗೆ ಚಿತ್ರಮಂದಿರದ ಮಾಲೀಕರಾದ ನಾಗೇಶ್‌ ಜಯನಗರ 3ನೇ ಬ್ಲಾಕ್‌ನ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಕಳೆದ 2 ವರ್ಷಗಳಿಂದ ನೇಪಾಳ ಮೂಲದ ಗಣೇಶ್‌ ಮತ್ತು ಗೀತಾ ಮನೆಕೆಲಸ ಮಾಡಿಕೊಂಡಿದ್ದರು. ಅ.21 ಸಂಜೆ ಕಾರ್ಯಕ್ರಮ ನಿಮಿತ್ತ ನಾಗೇಶ್‌ ಪುತ್ರ ವೆಂಕಟೇಶ್‌ ಸೇರಿ ಕುಟುಂಬದ ಸದಸ್ಯರು ಹೊರಗೆ ಹೋಗಿದ್ದರು.

ಈ ವೇಳೆ ಮನೆಯಲ್ಲಿ ನಾಗೇಶ್‌ ಮದ್ಯಪಾನ ಮಾಡುವಾಗ, ಕೆಲಸಗಾರರಾದ ಗಣೇಶ್‌ ಮತ್ತು ಗೀತಾ ದಂಪತಿ ನಾಗೇಶ್‌ ಅವರ ಗಮನ ಬೇರೆಡೆ ಸೆಳೆದು ಮದ್ಯಕ್ಕೆ ಮತ್ತು ಬರುವ ಔಷಧಿ ಬೆರೆಸಿದ್ದಾರೆ. ಮದ್ಯ ಸೇವಿಸಿದ ನಾಗೇಶ್ ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ತಮ್ಮ ಸಹಚರರಾದ ಪ್ರಕಾಶ್‌ ಶಾಹಿ, ಅಪೀಲ್‌ ಶಾಹಿ ಹಾಗೂ ಜಗದೀಶ್‌ ಶಾಹಿಯನ್ನು ಮನೆಗೆ ಕರೆಸಿಕೊಂಡು ಮನೆಯ ಕೊಠಡಿಯ ಬೀರುವಿನ ಲಾಕ್‌ ಮುರಿದು 2.50 ಲಕ್ಷ ರು. ನಗದು, 2 ಕೆ.ಜಿ.510 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.

ನಗರದಲ್ಲೇ ಸಿಕ್ಕಿಬಿದ್ದ ಮೂವರು: ರಾತ್ರಿ ನಾಗೇಶ್‌ ಪುತ್ರ ವೆಂಕಟೇಶ್‌ ಮನೆಗೆ ವಾಪಾಸ್‌ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ದೀಪಕ್‌ ನೇತೃತ್ವದಲ್ಲಿ ತನಿಖೆ ನಡೆಸಿ ವರ್ತೂರಿನ ಬಲಗೆರೆ ರಸ್ತೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ವರ್ತೂರಿನ ಮನೆಯಲ್ಲಿ ಬಚ್ಚಿಟ್ಟಿದ್ದ 1.6 ಕೆ.ಜಿ. ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳು ಜಪ್ತಿ ಮಾಡಲಾಗಿದೆ. ಗುಜರಾತ್‌ನಲ್ಲಿ ಆರೋಪಿಗಳು ಜಸ್ಟ್‌ ಮಿಸ್‌: ಮನೆಗಳವು ಬಳಿಕ ಐವರು ಆರೋಪಿಗಳು ರೈಲಿನಲ್ಲಿ ಹೈದರಾಬಾದ್‌ಗೆ ಪರಾರಿಯಾಗಿದ್ದರು. ಬಳಿಕ ಮುಂಬೈಗೆ ಹೋಗಿ ಅಲ್ಲಿಂದ ಗುಜರಾತ್‌ಗೆ ತೆರಳಿ ಕದ್ದ ಮಾಲುಗಳನ್ನು ಹಂಚಿಕೊಂಡಿದ್ದರು. ಆರೋಪಿಗಳಾದ ಗಣೇಶ್‌ ಮತ್ತು ಗೀತಾ ದಂಪತಿ ಗುಜರಾತ್‌ನ ವಾಪಿ ರೈಲು ನಿಲ್ದಾಣದಿಂದ ಬೇರೆಡೆಗೆ ಪರಾರಿಯಾಗಿದ್ದಾರೆ. ಉಳಿದ ಮೂವರು ಆರೋಪಿಗಳು ಮತ್ತೆ ಬೆಂಗಳೂರಿಗೆ ವಾಪಾಸ್‌ ಆಗಿದ್ದರು. ಮತ್ತೊಂದೆಡೆ ಪೊಲೀಸರ ತಂಡವು ಗುಜರಾತ್‌ವರೆಗೂ ಆರೋಪಿಗಳ ಬೆನ್ನತ್ತಿತ್ತು. ಇನ್ನೇನು ಬಂಧೀಸಬೇಕು ಎನ್ನುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು.ಬೆಂಗಳೂರಿಗೆ ವಾಪಸ್ಸಾಗಿ ಸಿಕ್ಕಿ ಬಿದ್ದರು! ಐವರು ಆರೋಪಿಗಳ ಪೈಕಿ ಗಣೇಶ್‌ ಮತ್ತು ಗೀತಾ ದಂಪತಿ ನಾಗೇಶ್‌ ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು. ಆರೋಪಿ ಅಪಿಲ್‌ ಶಾಹಿ ವರ್ತೂರಿನ ಖಾಸಗಿ ಶಾಲೆಯಲ್ಲಿ ಸೆಕ್ಯೂರಿ ಗಾರ್ಡ್‌, ಆರೋಪಿ ಜಗದೀಶ್‌ ಶಾಹಿ ಸ್ವಿಗ್ಗಿ ಡೆಲಿವರಿ ಬಾಯ್‌ ಹಾಗೂ ಆರೋಪಿ ಪ್ರಕಾಶ್‌ ಶಾಹಿ ಯಲಹಂಕ ನ್ಯೂಟೌನ್‌ನಲ್ಲಿ ಸೆಕ್ಯೂರಿ ಗಾರ್ಡ್‌ ಕೆಲಸ ಮಾಡುತ್ತಿದ್ದರು. ಪೊಲೀಸರು ಆರೋಪಿಗಳಾದ ಗಣೇಶ್‌ ಮತ್ತು ಗೀತಾ ದಂಪತಿ ಬೆನ್ನುಬಿದ್ದಿದ್ದಾರೆ. ನಾವು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಹೀಗಾಗಿ ನಾವು ಬೆಂಗಳೂರಿಗೆ ವಾಪಸ್‌ ಆಗಿ ಎಂದಿನಂತೆ ಕೆಲಸ ಮಾಡಿಕೊಂಡು ಇರಬಹುದು ಎಂದು ಈ ಮೂವರು ಆರೋಪಿಗಳು ಗುಜರಾತ್‌ನಿಂದ ಬೆಂಗಳೂರಿಗೆ ವಾಪಸ್‌ ಆಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೆರಳಚ್ಚು ಮುದ್ರೆಯಿಂದ ಹಳೇ ಪ್ರಕರಣ ಬೆಳಕಿಗೆ: ಆರೋಪಿ ಅಪಿಲ್‌ ಶಾಹಿ 2017ರಲ್ಲಿ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿ ಮನೆಗಳವು ಮತ್ತು ಆರೋಪಿ ಪ್ರಕಾಶ್‌ ಶಾಹಿ 2022ರಲ್ಲಿ ಯಲಹಂಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಆದರೂ ಇಬ್ಬರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಆರೋಪಿಗಳ ಬೆರಳಚ್ಚು ಮುದ್ರೆ ಸಂಗ್ರಹಿಸಿ ನಗರದಲ್ಲಿ ಈ ಹಿಂದೆ ನಡೆದ ಮನೆಗಳವು ಪ್ರಕರಣಗಳ ಘಟನಾ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಬೆರಳಚ್ಚು ಮುದ್ರೆಗೆ ಹೋಲಿಕೆ ಮಾಡಿದಾಗ ವೈಟ್‌ಫೀಲ್ಡ್‌ ಮತ್ತು ಯಲಹಂಕ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.