1 ತಿಂಗಳಲ್ಲಿ 64 ಡ್ರಗ್ಸ್‌ ಪೆಡ್ಲರ್‌ಗಳ ಸೆರೆ: ದಯಾನಂದ್‌

| Published : Nov 13 2024, 01:30 AM IST

ಸಾರಾಂಶ

ಕಳೆದ ತಿಂಗಳಾವಧಿಯಲ್ಲಿ ಮಾದಕ ವಸ್ತು ಮಾರಾಟದ 42 ಪ್ರಕರಣಗಳು ದಾಖಲಾಗಿದ್ದು, 10 ವಿದೇಶಿ ಪ್ರಜೆಗಳು ಸೇರಿದಂತೆ 64 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ತಿಂಗಳಾವಧಿಯಲ್ಲಿ ಮಾದಕ ವಸ್ತು ಮಾರಾಟದ 42 ಪ್ರಕರಣಗಳು ದಾಖಲಾಗಿದ್ದು, 10 ವಿದೇಶಿ ಪ್ರಜೆಗಳು ಸೇರಿದಂತೆ 64 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವಸ್ತು ಮಾರಾಟದ ಮೇಲೆ ತೀವ್ರ ನಿಗಾವಹಿಸಿ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿದರು.

ನಗರದ ವ್ಯಾಪ್ತಿ ಅಕ್ಟೋಬರ್‌ನಲ್ಲಿ 42 ಎನ್‌ಡಿಪಿಎಸ್‌ ಪ್ರಕರಣಗಳು ದಾಖಲಾಗಿದ್ದು, 10 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 64 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1.40 ಕ್ವಿಂಟಾಲ್‌ ಗಾಂಜಾ, 1.213 ಕೆಜಿ ಗಾಂಜಾ ಆಯಿಲ್‌, 609 ಗ್ರಾಂ ಅಫೀಮು, 770 ಗ್ರಾಂ ಹೆರಾಯಿನ್‌, 2.436 ಕೆಜಿ ಚರಸ್‌, 509 ಗ್ರಾಂ ಕೊಕೇನ್ ಸೇರಿದಂತೆ ಕೋಟ್ಯಾಂತರ ರು ಮೌಲ್ಯದ ಇತರೆ ಡ್ರಗ್ಸ್‌ ಅನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.

ಅದೇ ಕಳೆದ ತಿಂಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ, ಸುಲಿಗೆ, ಕಳವು ಹಾಗೂ ಪೊಕ್ಸೋ ಸೇರಿದಂತೆ ಇತರೆ 30 ಪ್ರಕರಣಗಳಲ್ಲಿ 55 ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಹಾಗೆಯೇ ನಗರದಲ್ಲಿ ರೌಡಿಸಂ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ಕಳೆದ ತಿಂಗಳಾವಧಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 193 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಳೇ ಪ್ರಕರಣದಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ 16 ರೌಡಿಗಳನ್ನು ಬಂಧಿಸಲಾಗಿದೆ. ಇನ್ನು ಕಳೆದ ತಿಂಗಳು 1024 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಇದರಲ್ಲಿ 502 ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯದ ಶಿಕ್ಷೆ ವಿಧಿಸಿದೆ ಎಂದರು.