ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ವರುಣಾರ್ಭಟದ ನಡುವೆ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟು, ಏಳು ಮಂದಿ ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವ ಘಟನೆ ಮಂಗಳವಾರ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ಅರ್ಮಾನ್(26) ಮೃತ ಕಾರ್ಮಿಕ. ಬಿಹಾರ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಮೂಲದ ಒಟ್ಟು 13 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಳಿದ 8 ಮಂದಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಹಿಳೆ ಸೇರಿ ಇನ್ನೂ ಏಳು ಮಂದಿ ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವವರು ಹೆಣ್ಣೂರು ಸಮೀಪದ ಬಾಬುಸಾಬ್‌ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದರು. ಈ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಿಹಾರ, ಆಂಧ್ರಪ್ರದೇಶ ಹಾಗೂ ಯಾದಗಿರಿ ಮೂಲದ ಒಟ್ಟು 21 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ವೇಳೆ ಈ ಕಟ್ಟಡದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಮಂಗಳವಾರ ಎಂದಿನಂತೆ ಕಾರ್ಮಿಕರು ಕಟ್ಟಡದೊಳಗೆ ಟೈಲ್ಸ್ ಸೇರಿದಂತೆ ಇತರೆ ಕೆಲಸಗಳಲ್ಲಿ ಮಗ್ನರಾಗಿದ್ದರು. ಮಧ್ಯಾಹ್ನ ಸುಮಾರು 3.40ಕ್ಕೆ ಏಕಾಏಕಿ ಪಿಲ್ಲರ್‌ಗಳ ಸಮೇತ ಇಡೀ ಕಟ್ಟಡ ಬಲಭಾಗಕ್ಕೆ ಕುಸಿದಿದೆ. ಕಟ್ಟಡ ಕುಸಿತದ ಭಯಾನಕ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ರಕ್ಷಣಾ ಕಾರ್ಯಾಚರಣೆ:
ಕಟ್ಟಡ ಕುಸಿತದ ಸುದ್ದಿ ತಿಳಿದು ಹೆಣ್ಣೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಜೆಸಿಬಿ ಹಾಗೂ ಕಬ್ಬಿಣ ಕತ್ತರಿಸುವ ಯಂತ್ರದ ಸಹಾಯದಿಂದ ಕಟ್ಟಡ ಹಾಗೂ ಅವಶೇಷಗಳ ಅಡಿ ಸಿಲುಕಿದ್ದ 13 ಮಂದಿ ಕಾರ್ಮಿಕರನ್ನು ರಕ್ಷಿಸಿದರು.ಈ ಪೈಕಿ ಅರ್ಮಾನ್ ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಮೃತಪಟ್ಟಿದ್ದು, ಮೃತದೇಹವನ್ನು ಹೊರಗೆ ತರಲಾಯಿತು. ರಕ್ಷಿಸಿ ಹೊರಗೆ ಕರೆತಂದ 13 ಮಂದಿ ಕಾರ್ಮಿಕರ ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಐವರು ಕಾರ್ಮಿಕರನ್ನು ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಯಿತು. ಉಳಿದ 8 ಮಂದಿ ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ 7 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಕ್ಷಿಸಲ್ಪಟ್ಟ ಕಾರ್ಮಿಕರು
ಬಿಹಾರ ಮೂಲದ ಅರ್ಮಾನ್, ಜಿಸಾನ್, ಮಹಮದ್ ಸಾಹೀಲ್, ರಶೀದ್, ಸಿತಾರೆ, ಇಲೀಫ್, ಸೋಹಿಲ್, ರಮೇಶ್ ಕುಮಾರ್, ವಕೀಲ್ ಪಾಸ್ವಾನ್, ಚಿತ್ತೂರು ಮೂಲದ ಪ್ರದೀಪ್ ರೆಡ್ಡಿ. ಯಾದಗಿರಿ ಮೂಲದ ಜಗಮ್ಮ, ಮಲ್ಲಪ್ಪ ಹಾಗೂ ನಾಗರಾಜು.ಆಸ್ಪತ್ರೆಯಲ್ಲಿರುವ ಕಾರ್ಮಿಕರು-ಯಾದಗಿರಿ ಮೂಲದ ಜಗಮ್ಮ, ಮಲ್ಲಪ್ಪ, ನಾಗರಾಜು, ಬಿಹಾರ ಮೂಲದ ರಮೇಶ್ ಕುಮಾರ್ ಹಾಗೂ ವಕೀಲ್ ಪಾಸ್ವಾನ್.ನಾಪತ್ತೆಯಾದ ಕಾರ್ಮಿಕರು
ಬಿಹಾರ ಮೂಲದ ಮಹಮ್ಮದ್ ಅರ್ಮಾನ್, ಮಹಮ್ಮದ್ ಅರ್ಷದ್, ತಿರುಪಾಲಿ, ಸೋಲೋ ಪಾಸ್ವಾನ್, ಚಿತ್ತೂರು ಮೂಲದ ಸುಳಸಿ ರೆಡ್ಡಿ, ಗಜೇಂದ್ರ ಹಾಗೂ ಏಳುಮಲೈ.ಮಾಲೀಕನ ವಿರುದ್ಧ ಕೇಸ್ಕಟ್ಟಡ ಕುಸಿತ ಅವಘಡ ಸಂಬಂಧ ಗಾಯಾಳುಗಳಿಂದ ದೂರು ಪಡೆದು ಕಟ್ಟಡ ಮಾಲೀಕ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಎಂಬಾತನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಟ್ಟಡ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಬಳಿಕ ಮುನಿರಾಜು ರೆಡ್ಡಿ ಯಾರ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅನಧಿಕೃತವಾಗಿ ಕಟ್ಟಡ ನಿರ್ಮಾಣ
ಮಾಲೀಕ ಮುನಿರಾಜು ರೆಡ್ಡಿ ಅನಧಿಕೃತ ಕಂದಾಯ ಬಡಾವಣೆಯಲ್ಲಿ ಈ ಆರು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದರು. ಇದು ‘ಬಿ’ ಖಾತಾ ನಿವೇಶನ ಆಗಿರುವುದರಿಂದ ಬಿಬಿಎಂಪಿ ನಕ್ಷೆ ನೀಡುವುದಿಲ್ಲ. ಆದರೂ ಮುನಿರಾಜು ಅನಧಿಕೃತವಾಗಿ ಈ ಕಟ್ಟಡ ನಿರ್ಮಿಸುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಿಬಿಎಂಪಿ ಅಧಿಕಾರಿಗಳು ಮುನಿರಾಜುಗೆ ನೋಟಿಸ್ ಜಾರಿ ಮಾಡಿದ್ದರು ಎಂದು ತಿಳಿದು ಬಂದಿದೆ.ಕುಸಿತಕ್ಕೆ ಕಳಪೆ ಕಾಮಗಾರಿಕಾರಣ: ಬೈರತಿ ಬಸವರಾಜು
ನಿರ್ಮಾಣ ಹಂತದ ಕಟ್ಟಡ ಕುಸಿತದ ವಿಚಾರ ತಿಳಿದು ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಕಳಪೆ ಕಾಮಗಾರಿಯೇ ಕಟ್ಟಡ ಕುಸಿತಕ್ಕೆ ಕಾರಣ ಎಂದು ಆರೋಪಿಸಿದ ಶಾಸಕ ಬೈರತಿ ಬಸವರಾಜು ಅವರು ಈ ಕಟ್ಟಡ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಕಟ್ಟಡದ ಅಡಿ ಸಿಕ್ಕವರ ರಕ್ಷಿಸಿ:ಹೊರಬಂದ ಕಾರ್ಮಿಕ ಕಣ್ಣೀರು
ಮಳೆ ಬರುತ್ತಿದ್ದರಿಂದ ಎಲ್ಲಾ ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡದೊಳಗೆ ಇದ್ದರು. ಏಕಾಏಕಿ ಕಟ್ಟಡ ಕುಸಿಯುತ್ತಿದ್ದಂತೆ ಅವಶೇಷಗಳ ನಡುವಿನಿಂದ ಸಾಹಸ ಮಾಡಿ ಹೊರಗೆ ಬಂದ ಕಾರ್ಮಿಕನೊಬ್ಬ ರಕ್ತ ಸೋರುತ್ತಿದ್ದರೂ ಕಟ್ಟಡದೊಳಗೆ ಇನ್ನೂ ಹಲವು ಕಾರ್ಮಿಕರು ಸಿಲುಕಿದ್ದಾರೆ. ಅವರನ್ನು ರಕ್ಷಿಸುವಂತೆ ಕಣ್ಣೀರಿಟ್ಟನು. ಆತನ ತಲೆಗೆ ಗಾಯವಾಗಿ ರಕ್ತ ಸೋರುತ್ತಿದ್ದರಿಂದ ಕೂಡಲೇ ಆತನನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು.ಡಿಸಿಎಂ ಡಿಕೆಶಿ, ಲಾಡ್ ಭೇಟಿ
ಕಟ್ಟಡ ಕುಸಿತ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಗಳವಾರ ರಾತ್ರಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದರು. ಘಟನೆ ಕುರಿತು ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.