ಸಿನಿಮೀಯ ರೀತಿ ಕದೀಮರಿಂದ ತಪ್ಪಿಸಿಕೊಂಡು ಬಂದ ಬಾಲಕ..!

| Published : Oct 23 2024, 12:36 AM IST / Updated: Oct 23 2024, 12:37 AM IST

ಸಾರಾಂಶ

ಎಂದಿನಂತೆ ಹಳೆ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್ ಹೋಗುತ್ತಿದ್ದ ವೇಳೆ ಮಂಗಳವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ ಅಪಹರಣಕಾರರು ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಪಹರಣಕ್ಕೊಳಗಾದ ಬಾಲಕನೊಬ್ಬ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಗಿನ ಜಾವ ಜರುಗಿದೆ.

ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವರ ಪುತ್ರ ಯೋಗೇಶ್ ತಪ್ಪಿಸಿಕೊಂಡ ಬಾಲಕ. ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿರುವ ಯೋಗೇಶ್ ಪಟ್ಟಣದ ಗೌಡಯ್ಯನ ಬೀದಿಯ 3ನೇ ಕ್ರಾಸ್ ಅವರ ಮಾವ ಮನೆಯಲ್ಲಿದ್ದು, ಶಾಲೆಗೆ ಹೋಗಿ ಬರುವುದು ಮಾಡುತ್ತಿದ್ದ. ಎಂದಿನಂತೆ ಹಳೆ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್ ಹೋಗುತ್ತಿದ್ದ ವೇಳೆ ಮಂಗಳವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ ಅಪಹರಣಕಾರರು ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ.

ಅಪಹರಣಕಾರರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಾಹನ ನಿಲ್ಲಿಸಿ ಸಿಗರೇಟ್ ಸೇದುತ್ತಿದ್ದ ವೇಳೆ ಅಪಹರಣಕಾರನ ಕೈ ಕಚ್ಚಿ ಸುಮಾರು ಒಂದು ಕೀ.ಮೀ. ದೂರ ಓಡಿಬಂದು ಕ್ಯಾಬ್ ಚಾಲಕನೊಬ್ಬರ ನಂಬರ್‌ನಿಂದ ಅವರ ಮಾವನಿಗೆ ಕಾಲ್ ಮಾಡಿ ನಡೆದ ಘಟನೆಯಲ್ಲಿ ವಿವರಿಸಿದ್ದಾನೆ. ಅಪಹರಣಕಾರರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಕೂಡಲೇ ಪಿರಿಯಾಪಟ್ಟಣಕ್ಕೆ ತೆರಳಿದ್ದ ಸಂಬಂಧಕರು ಬಾಲಕನನ್ನು ಕರೆದುಕೊಂಡು ಮಳವಳ್ಳಿಗೆ ಬಂದಿದ್ದಾರೆ ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾಲಕನ ತಂದೆ ಈರೇಗೌಡ ದೂರು ನೀಡಿದ್ದಾರೆ.

ಈ‌ ಸಂಬಂಧ ಐವರು ಅಪರಿಚಿತರು ವಿರುದ್ಧ ಎಫ್ಐಆರ್ ದಾಖಲಾಗಿದೆ.