ಹನ್ನೊಂದು ವರ್ಷದ ಬಾಲಕನನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ 70 ವರ್ಷದ ವೃದ್ಧನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಹನ್ನೊಂದು ವರ್ಷದ ಬಾಲಕನನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ 70 ವರ್ಷದ ವೃದ್ಧನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಬಿಇಎಲ್‌ ಲೇಔಟ್‌ ನಿವಾಸಿ ರಾಮ ಮನೋಹರ್‌(70) ಬಂಧಿತ. ಭಾನುವಾರ ಸಂಜೆ ದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ಬಾಲಕನ ಪೋಷಕರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಉತ್ತರ ಪ್ರದೇಶ ಮೂಲದ ಆರೋಪಿ ರಾಮ ಮನೋಹರ್‌ ಕಳೆದ ಸುಮಾರು 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಗ್ರಂಧಿಗೆ ವಸ್ತುಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದ. ಇದರ ಪಕ್ಕದ ಶೆಡ್‌ನಲ್ಲೇ ಮಲಗುತ್ತಿದ್ದ. ಭಾನುವಾರ ಸಂಜೆ ಬಾಲಕ ದೇವಸ್ಥಾನಕ್ಕೆ ಬಂದು ಪ್ರಸಾದ ಪಡೆದು ಮನೆಗೆ ಕಡೆಗೆ ತೆರಳುತ್ತಿದ್ದ. ಈ ವೇಳೆ ಆರೋಪಿ ರಾಮ ಮನೋಹರ್‌, ಬಾಲಕನನ್ನು ಪುಸಲಾಯಿಸಿ ಶೆಡ್‌ಗೆ ಕರೆದೊಯ್ದು ಬಾಲಕನ ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ.

ಬಳಿಕ ಬಾಲಕ ಮನೆಗೆ ಬಂದು ನಡೆದ ಘಟನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಪೋಷಕರು ವಿದ್ಯಾರಣ್ಯಪುರ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.