ಸಾರಾಂಶ
ಮಳವಳ್ಳಿ : ಪಟ್ಟಣದ 15ನೇ ವಾರ್ಡ್ ಗೌರಿಗೇರಿ ಬೀದಿಯಲ್ಲಿ ಆಟವಾಡುತ್ತಿದ್ದ ಮೂವರು ಬಾಲಕಿಯರು ಸೇರಿದಂತೆ ನಾಲ್ವರ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ.
ಸೋಮವಾರ ಬೆಳಗ್ಗೆ ಮನೆ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ನಿಝಾ ಬಾನು, ಮೂರು ವರ್ಷದ ಅತೀಫ್ ಬಾನು, 12 ವರ್ಷದ ಅಬ್ರಿನಾ ಬಾನು ಮೇಲೆ 12 ನಾಯಿಗಳ ಹಿಂಡು ದಾಳಿ ಮಾಡಿವೆ. ಮಕ್ಕಳನ್ನು ರಕ್ಷಿಸಲು ಹೋದ 45 ವರ್ಷದ ಶಕೀಲಾ ಬಾನು ಅವರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಘಟನೆಯಲ್ಲಿ ನಿಝಾ ಬಾನು ಮತ್ತು ಅತೀಫ್ ಬಾನು ಕೈ, ಕಾಲು, ಬೆನ್ನು, ತುಟಿಯು ತೀವ್ರವಾಗಿ ಗಾಯವಾಗಿದೆ. ಗಾಯಗೊಂಡಿರುವವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನರ ಆಕ್ರೋಶ:
ಮುಖಂಡರಾದ ವೇದಾವತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾಗೂ ಕೋತಿಗಳ ಹಾವಳಿ ವಿಪರೀತವಾಗಿದೆ. ಅವುಗಳಲ್ಲಿ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಗೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯವಾಗುತ್ತದೆ ಎಂದು ಎಚ್ಚರಿಸಿದರು.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಮಂಡ್ಯ:
ಪಾಂಡವಪುರ- ರೈಲು ಯಾರ್ಡನ ಬಳಿ ರೈಲುಗಾಡಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಗೆ ಸುಮಾರು 50 ವರ್ಷವಾಗಿದೆ. 5.5 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ದಾಡಿ, ಮೈಮೇಲೆ ಕಪ್ಪು ಬಣ್ಣದ ಜರ್ಕಿನ್, ಕೆಂಪು ಬಣ್ಣದ ಟೀ ಶರ್ಟ, ಕೆಂಪು ಉಡುದಾರ, ಕತ್ತಿನಲ್ಲಿ ಕಪ್ಪು ಮಣಿ, ಕನ್ನಡಕ, ಬಲಗೈಯಲ್ಲಿ ಸ್ಟೀಲ್ ಬಳೆ, ಮತ್ತು ಸಿಮೆಂಟ್ ಬಣ್ಣದ ಕಡ್ಡಿ ಧರಿಸಿರುತ್ತಾರೆ. ವಾರಸುದಾರರಿದ್ದಲ್ಲಿ ರೈಲ್ವೆ ಪೊಲೀಸ್ ಠಾಣೆಯ ದೂ-08212516579 ಅನ್ನು ಸಂಪರ್ಕಿಸಬಹುದೆಂದು ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.