ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಸಾರಿಗೆ ಬಸ್‌ ಪಲ್ಟಿ : 36 ಮಂದಿ ಪ್ರಯಾಣಿಕರಿಗೆ ಗಾಯ

| Published : Jan 21 2025, 12:32 AM IST / Updated: Jan 21 2025, 04:38 AM IST

ಸಾರಾಂಶ

ಸಾರಿಗೆ ಸಂಸ್ಥೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಹಿಳೆಯರು ಸೇರಿದಂತೆ 36 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಸಮೀಪದ ಹಳೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಜರುಗಿದೆ.

 ಮದ್ದೂರು : ಸಾರಿಗೆ ಸಂಸ್ಥೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಹಿಳೆಯರು ಸೇರಿದಂತೆ 36 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ರುದ್ರಾಕ್ಷಿಪುರ ಸಮೀಪದ ಹಳೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.

ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಬಸ್‌ನಲ್ಲಿದ್ದ ಬಿ.ರಾಜೇಶ್‌, ಮಲ್ಲಮ್ಮ, ಭಾನು, ತೇಜಸ್ವಿನಿ, ಮಂಜು, ರವಿ, ನಂಜುಂಡಸ್ವಾಮಿ ಹಾಗೂ ಮಹೇಶ್ ಸೇರಿದಂತೆ 36 ಮಂದಿ ಗಾಯಗೊಂಡಿದ್ದಾರೆ.

ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಸಂಚಾರಿ ಠಾಣೆ ಪಿಎಸ್ಐ ರಾಮಸ್ವಾಮಿ, ಕಮಲಾಕ್ಷಿ ಹಾಗೂ ಸಿಬ್ಬಂದಿ ಸಾರ್ವಜನಿಕರ ನೆರವಿನಿಂದ ಉರುಳಿ ಬಿದ್ದ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರದಿಂದ ಮದ್ದೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಚಾಮರಾಜನಗರ ಡಿಪೋಗೆ ಸೇರಿದ ಬಸ್‌ ಬೆಳಗ್ಗೆ 8:45 ಸುಮಾರಿಗೆ ರುದ್ರಾಕ್ಷಿ ಪುರ ಸಮೀಪದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಮುರಳಿ ಬಿದ್ದು ಅಪಘಾತ ಸಂಭವಿಸಿದೆ.

ಅಪಘಾತ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಯಾವುದೇ ವಾಹನ ಬರದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಬಸ್ ಚಾಲಕ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಚಿವರು, ಡೀಸಿ, ಸಾರಿಗೆ ಅಧಿಕಾರಿಗಳು ಪರಿಶೀಲನೆ

ಮದ್ದೂರು:  ಬಸ್ ಅಪಘಾತಕ್ಕೀಡಾದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಪ್ಪದಲ್ಲಿ ನಡೆಯುತ್ತಿದ್ದ ಜನತಾದರ್ಶನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಅಪಘಾತ ಕುರಿತು ಮಾಹಿತಿ ಪಡೆದುಕೊಂಡರು.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಆಸ್ಪತ್ರೆ ವೈದ್ಯರಿಗೆ ಡೀಸಿ ಡಾ.ಕುಮಾರ ನಿರ್ದೇಶನ ನೀಡಿದರು. ಗಾಯಗೊಂಡಿರುವ ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸಾ ವೆಚ್ಚವನ್ನು ಸಾರಿಗೆ ಇಲಾಖೆಯಿಂದ ಭರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್, ಡಿಎಚ್‌ಒ ಡಾ.ಮೋಹನ್, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗರಾಜು ಹಾಗೂ ಮದ್ದೂರು ಡಿಪೋ ಅಧಿಕಾರಿಗಳು ಹಾಜರಿದ್ದರು.