ಸಾರಾಂಶ
ಬೆಂಗಳೂರು : ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಹಿಂದಿನಿಂದ ಹೊಡೆದು ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಬೀಸನಹಳ್ಳಿ ನಿವಾಸಿ ಶ್ರೀಕಾಂತ್ (32) ಬಂಧಿತ. ಆರೋಪಿಯು ಏ.30ರಂದು ರಾತ್ರಿ ಸುಮಾರು 11.40ಕ್ಕೆ ದೇವರಬೀಸನಹಳ್ಳಿ ಇಕೋ ವರ್ಲ್ವ್ ಮುಖ್ಯ ಗೇಟ್ ಬಳಿ ನಡೆದು ಹೋಗುತ್ತಿದ್ದ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬೆನ್ನ ಕೆಳಭಾಗಕ್ಕೆ ಹೊಡೆದಿದ್ದ. ಬಳಿಕ ಮತ್ತೆ ದ್ವಿಚಕ್ರ ವಾಹನವನ್ನು ಯು ಟರ್ನ್ ಪಡೆದು ಯುವತಿ ಬಳಿ ಬಂದು ಮತ್ತೊಮ್ಮೆ ಅದೇ ರೀತಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ನೊಂದ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶ್ರೀಕಾಂತ್ ಎಂಬಿಎ ಪದವಿಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ಸುಳಿವು ಆಧರಿಸಿ ಸೆರೆ:
ಆರೋಪಿ ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದು, ಅದರ ಮೇಲೆ ಈಟ್ ಕ್ಲಬ್ ಎಂದು ಬರೆದಿರುವುದನ್ನು ಸಂತ್ರಸ್ತೆ ಗಮನಿಸಿ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿ ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಧೈರ್ಯವಾಗಿ ದೂರು ನೀಡಿ:
ಮಹಿಳೆಯರಿಗೆ ಕಿರುಕುಳ ನೀಡುವ ಘಟನೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಧೈರ್ಯವಾಗಿ ದೂರು ನೀಡಿ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ಸಂಖ್ಯೆ 9480801084 ಅಥವಾ ಮಾರತಹಳ್ಳಿ ಎಸಿಪಿ 9480801607 ಅಥವಾ ಮಾರತಹಳ್ಳಿ ಇನ್‌ಸ್ಪೆಕ್ಟರ್ 9480801615 ಸಂಖ್ಯೆಗೆ ನೇರವಾಗಿ ಕರೆ ಮಾಡಿ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.


;Resize=(128,128))
;Resize=(128,128))
;Resize=(128,128))
;Resize=(128,128))