ಸಾರಾಂಶ
ಬೆಂಗಳೂರು : ಯುವತಿಯೊಬ್ಬಳು ಹಾಡಹಗಲೇ ರಸ್ತೆಯಲ್ಲಿ ನಗ್ನವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ತಿಂಗಳ ಹಿಂದೆ ಎಚ್‌ಎಸ್‌ಆರ್ ಲೇಔಟ್‌ನ ಅಗರ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೇಯಿಂಗ್ ಗೆಸ್ಟ್(ಪಿಜಿ)ನಲ್ಲಿ ತಂಗಿರುವ ಯುವತಿಯ ಈ ವರ್ತನೆ ಸ್ಥಳೀಯ ನಿವಾಸಿಗಳನ್ನು ಮುಜುಗರಕ್ಕೀಡು ಮಾಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಸ್ಥಳೀಯ ನಿವಾಸಿಗಳೊಂದಿಗೆ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.
ಈ ಭಾಗದಲ್ಲಿ ಪಿಜಿಗಳು ಹೆಚ್ಚಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯುವಕ-ಯುವತಿಯರ ವರ್ತನೆಗಳು ಮಿತಿ ಮೀರಿವೆ. ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗಳಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ದೂರು ನೀಡಿದರೂ ಕ್ರಮವಿಲ್ಲ:
ಎಚ್‌ಎಸ್‌ಆರ್ ಬಡಾವಣೆಯ ಅಗರ ಲೇಔಟ್‌ನಲ್ಲಿ ಸಾಕಷ್ಟು ಪಿಜಿಗಳಿವೆ. ಆರೇಳು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ, ಅದರೊಳಗೆ ಸಣ್ಣ ರೂಮ್‌ಗಳನ್ನು ಪಿಜಿಗಳಾಗಿ ಪರಿವರ್ತಿಸಲಾಗಿದೆ. ಹಣದಾಸೆಗೆ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ಮಾಲೀಕರು ಪಿಜಿಗಳನ್ನು ನಡೆಸುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ಯುವಕ-ಯುವತಿಯರು ರಸ್ತೆಗಳಲ್ಲಿ ಓಡಾಡುತ್ತಾರೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾರೆ. ಈ ಬಗ್ಗೆ ಪೊಲೀಸರು, ಬಿಬಿಎಂಪಿ ಸೇರಿ ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಸಭ್ಯ ವರ್ತನೆ:
ಯುವಕ-ಯುವತಿಯರು ರಾತ್ರಿ ವೇಳೆ ಪಿಜಿಗಳಲ್ಲಿ ಪಾರ್ಟಿಗಳನ್ನು ಮಾಡುತ್ತಾರೆ. ಅಮಲಿನಲ್ಲಿ ರಸ್ತೆಗಳಿಗೆ ಬಂದು ಮುಜುಗರವಾಗುವಂತೆ ವರ್ತಿಸುತ್ತಾರೆ. ಕಟ್ಟಡಗಳಿಂದ ಕಟ್ಟಡಕ್ಕೆ ಜಿಗಿಯುತ್ತಾರೆ. ಮಹಿಳೆಯರು, ಹುಡುಗಿಯರು ಮಲಗಿರುವ ರೂಮ್‌ಗಳ ಕಿಟಿಕಿ ಬಳಿ ಬಂದು ಇಣುಕಿ ನೋಡುತ್ತಾರೆ. ಅಮಲಿನಲ್ಲಿ ಜೋರಾಗಿ ಕಿರುಚುವುದು, ಗಲಾಟೆ ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಸ್ಥಳೀಯರ ಜೊತೆ ಜಗಳಕ್ಕೆ ಬರುತ್ತಾರೆ. ಈ ಪಿಜಿಗಳಿಂದ ಸ್ಥಳೀಯ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಪೊಲೀಸರು ಅಕ್ರಮ ಪಿಜಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.