ಸಾರಾಂಶ
ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ರಾಮನಗರ : ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದ ಪವಿತ್ರ ಎಂಬುವ ಮಹಿಳೆ, ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದಾರೆ. ಎರಡೂ ಜಾಲತಾಣಗಳಲ್ಲಿ ಏ.8ರಂದು ಈಕೆ ವಿಡಿಯೋ ಪೋಸ್ಟ್ ಮಾಡಿದ್ದರು. ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರ ಜೋಡಿಸಿ, ಎಡಿಟ್ ಮಾಡಿದ ಚಿತ್ರವನ್ನು ಸಹ ಪವಿತ್ರ ಹಾಕಿಕೊಂಡಿದ್ದರು. ಪತಿ ಹೆಸರಿನ ಮುಂದೆ ಡಿ.ಕೆ.ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದರು.
ವಿಡಿಯೊದಲ್ಲಿ ಏನಿದೆ ? :
‘ಡಿ.ಕೆ.ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂಪಿಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂಥವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ’ ಎಂದು ಪವಿತ್ರ ವಿಡಿಯೋದಲ್ಲಿ ಹೇಳಿದ್ದಾರೆ.
ಪತಿಯಿಂದ ವಿಚ್ಛೇದನ:
ಮೈಸೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ, ಪತಿಯಿಂದ ವಿಚ್ಛೇದನ ಪಡೆದಿದ್ದರು. ಮೈಸೂರಿನಲ್ಲಿ ವಾಸವಿದ್ದ ಅಕ್ಕಪಕ್ಕದ ಮನೆಯವರ ಕಿರಿಕಿರಿ ತಾಳದೆ, ತಾನು ಡಿ.ಕೆ.ಸುರೇಶ್ ಪತ್ನಿ ಎಂದರೆ ಜನರು ಹೆದರುತ್ತಾರೆ ಎಂಬ ಕಾರಣಕ್ಕೆ ಮಾಜಿ ಸಂಸದನ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ್ದಾಗಿ ವಿಚಾರಣೆ ವೇಳೆ ಪವಿತ್ರ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.