ಸಾರಾಂಶ
ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಸಹಕಾರ ಕ್ಷೇತ್ರದತ್ತ ಒಲವು ತೋರಿದ್ದಾರೆ ಎಂಬ ಚರ್ಚೆಗಳು ಸಹಕಾರ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ.
ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಸಹಕಾರ ಕ್ಷೇತ್ರದತ್ತ ಒಲವು ತೋರಿದ್ದಾರೆ ಎಂಬ ಚರ್ಚೆಗಳು ಸಹಕಾರ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ.
ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ಸ್ಥಾನದ ಮೇಲೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಣ್ಣಿಟ್ಟಿದ್ದಾರೆ. ಹೀಗಾಗಿ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಅಲ್ಲಿಂದ ಪ್ರತಿನಿಧಿಯಾಗಿ ಹೋಗಿ ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಡಿ.ಕೆ.ಸುರೇಶ್ ಉತ್ತಮ ಸಂಸದ ಎಂಬ ಬಿರುದಿಗೆ ಪಾತ್ರರಾಗಿದ್ದವರು. ಹೀಗಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಎದುರು ಜನರ ಹೃದಯ ಗೆಲ್ಲಲು ಸಾಧ್ಯವಾಗಲಿಲ್ಲ. ಆ ಸೋಲಿನ ಆಘಾತದಿಂದ ಇಂದಿಗೂ ಡಿ.ಕೆ.ಸುರೇಶ್ ಹೊರ ಬಂದಿಲ್ಲ.
ಆದರೂ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಗೆಲ್ಲಿಸುವಲ್ಲಿ ಡಿ.ಕೆ.ಸುರೇಶ್ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬದ ವಿರುದ್ಧ ಸೇಡು ತೀರಿಸಿಕೊಂಡರು. ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಸಾರ್ವಜನಿಕ ಸಭೆ ಸಮಾರಂಭಗಳಿಂದ ಸುರೇಶ್ ದೂರ ಉಳಿಯುತ್ತಿದ್ದಾರೆ. ಇದೀಗ ಸಹಕಾರಿ ಕ್ಷೇತ್ರ ಚುನಾವಣೆಯಲ್ಲಿ ಅವರ ಹೆಸರು ಚಾಲ್ತಿಗೆ ಬಂದಿದೆ.ಡಿಕೆಸು ಎಲ್ಲಿಂದ ಸ್ಪರ್ಧೆ ?
ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್ )ದ ನಿರ್ದೇಶಕ ಸ್ಥಾನಕ್ಕೆ ಡಿ.ಕೆ.ಸುರೇಶ್ ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳೇ ಹೆಚ್ಚಾಗಿದೆ. ಇದಕ್ಕೆ ಕ್ಷೇತ್ರ ಪುನರ್ ವಿಂಗಡಣೆಯೂ ಪುಷ್ಟಿ ನೀಡುತ್ತಿದೆ. ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಗೆ ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳು ಬರುತ್ತವೆ. ಈ ಮೊದಲು 13 ನಿರ್ದೇಶಕರ ಪೈಕಿ ರಾಮನಗರ ಜಿಲ್ಲೆಯಿಂದ 5, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 4 ಹಾಗೂ ಬೆಂಗಳೂರು ನಗರ ಜಿಲ್ಲೆಯಿಂದ 4 ನಿರ್ದೇಶಕರು ಆಯ್ಕೆಯಾಗುತ್ತಿದ್ದರು.ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹಾರೋಹಳ್ಳಿ ಕ್ಷೇತ್ರ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ
ರಾಮನಗರ ಜಿಲ್ಲೆಯಲ್ಲಿ ನಿರ್ದೇಶಕರ ಸಂಖ್ಯೆ 6ಕ್ಕೆ ಹೆಚ್ಚಳಗೊಂಡಿದೆ. ಒಟ್ಟಾರೆ ಬಮೂಲ್ ನಿರ್ದೇಶಕರ ಸಂಖ್ಯೆ 14ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ನ ಎಚ್.ಎನ್.ಹರೀಶ್ ಕುಮಾರ್ ಈ ಬಾರಿ ಹೊಸ ಕ್ಷೇತ್ರ ಹಾರೋಹಳ್ಳಿಯಿಂದ ಸ್ಪರ್ಧೆ ಮಾಡುವಂತೆ ಪಕ್ಷದ ನಾಯಕರೇ ಸೂಚನೆ ನೀಡಿದ್ದಾರೆ. ಇನ್ನು ಕನಕಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದ ರಾಜ್ ಕುಮಾರ್ ಬದಲಿಗೆ ಬೇರೆಯವರಿಗೆ ಅವಕಾಶ ನೀಡಲು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಆ ಸ್ಥಾನಕ್ಕೆ ಡಿ.ಕೆ.ಸುರೇಶ್ ಹೆಸರು ಬಲವಾಗಿ ಕೇಳಿ ಬರುತ್ತಿದೆ.ಹಾಗೊಂದು ವೇಳೆ ಡಿ.ಕೆ.ಸುರೇಶ್ ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹಿಂದೇಟು ಹಾಕಿದಲ್ಲಿ, ಕರ್ನಾಟಕ ಹಾಲು ಮಹಾಮಂಡಳಿಗೆ ರಾಜ್ಯಸರ್ಕಾರದಿಂದ ನಾಮ ನಿರ್ದೇಶನ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಚರ್ಚೆಗಳು ಸಹಕಾರ ವಲಯದಲ್ಲಿ ನಡೆಯುತ್ತಿವೆ.
6ಕೆಆರ್ ಎಂಎನ್ 5,6.ಜೆಪಿಜಿ5.ಮಾಜಿ ಸಂಸದ ಡಿ.ಕೆ.ಸುರೇಶ್
6.ಕರ್ನಾಟಕ ಹಾಲು ಮಹಾಮಂಡಳಿ