ಮುಖ್ಯಮಂತ್ರಿ ಅವರ 1 ಲಕ್ಷ ಮನೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ. ನಿಗಮದ ಕಚೇರಿಗೆ ಭೇಟಿ ನೀಡಿದ 50ಕ್ಕೂ ಹೆಚ್ಚು ಅರ್ಜಿದಾರರು ಮನವಿ ಮಾಡಿದರು.
ಬೆಂಗಳೂರು : ಮುಖ್ಯಮಂತ್ರಿ ಅವರ 1 ಲಕ್ಷ ಮನೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ. ಸೋಮವಾರ ನಿಗಮದ ಕಚೇರಿಗೆ ಭೇಟಿ ನೀಡಿದ 50ಕ್ಕೂ ಹೆಚ್ಚು ಅರ್ಜಿದಾರರು, ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಫ್ಲ್ಯಾಟ್‌ಗಾಗಿ ಆರಂಭಿಕ ಠೇವಣಿ 1 ಲಕ್ಷ ರು.ಗಳನ್ನು 5 ವರ್ಷಗಳ ಹಿಂದೆಯೇ ಪಾವತಿ ಮಾಡಲಾಗಿದೆ. ಆದರೆ, ಈವರೆಗೂ ಫ್ಲ್ಯಾಟ್‌ಗಳ ಹಸ್ತಾಂತರ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಬಾಣವರ ಬಳಿ 796 ಮನೆಗಳನ್ನು ನಿರ್ಮಾಣ
ಚಿಕ್ಕಬಾಣವರ ಬಳಿ 796 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ನಿರ್ಮಿಸುತ್ತಿರುವ ಮನೆಗಳಿಗಾಗಿ 500ಕ್ಕೂ ಹೆಚ್ಚು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಗೆ ತಾತ್ಕಾಲಿಕ ಮನೆ ಹಂಚಿಕೆ ಪತ್ರವನ್ನು ನೀಡಲಾಗಿದೆ. ಆದರೆ, ಫ್ಲ್ಯಾಟ್ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ಕಳೆದ 6 ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿ ಸಾಗಿದೆ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.
ಹಣಕಾಸು ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಾಲ ಸೌಲಭ್ಯ ನೀಡಲು ಬ್ಯಾಂಕಿನವರು ನಮ್ಮಿಂದ ವೇತನ ಚೀಟಿ ಕೇಳುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಬಹುತೇಕರು ಕೂಲಿ ಕೆಲಸ ಮಾಡುವವರಾಗಿದ್ದಾರೆ. ಹೀಗಾಗಿ, ವೇತನ ಚೀಟಿ ಎಲ್ಲಿಂದ ತರುವುದು ಎಂದು ಅರ್ಜಿದಾರರು ಅಳಲು ತೋಡಿಕೊಂಡರು.
ಬೇಗ ಪೂರ್ಣಗೊಳಿಸುವ ಭರವಸೆ:
ಮನವಿ ಸ್ವೀಕರಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಅವರು ಬಾಕಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಫ್ಲ್ಯಾಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಭರವಸೆ ನೀಡಿದರು.

