ಕನ್ನಡಪ್ರಭ ವಾರ್ತೆ ಬೆಂಗಳೂರು

ಸೊಸೆ ಮೇಲೆ‌ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 75 ವರ್ಷದ ಮಾವನಿಗೆ, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಸೊಸೆ‌ ಸಲ್ಲಿಸಿದ ಪ್ರಮಾಣ ಪತ್ರ ಆಧರಿಸಿ ಹೈಕೋರ್ಟ್ ಜಾಮೀನು ನೀಡಿದೆ.

ಜಾಮೀನು ಮಂಜೂರು ಮಾಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ, ಪರ ವಕೀಲರ ಮೂಲಕ ಪ್ರಮಾಣ ಪತ್ರ ಸಲ್ಲಿಸಿದ ಸಂತ್ರಸ್ತೆ,‌ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುತ್ತಿದೆ. ಆರೋಪಿಗೆ ಜಾಮೀನು ನೀಡಲು ನನ್ನ ಆಕ್ಷೇಪ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಆರೋಪಿಯ ವಯಸ್ಸು ಹಾಗೂ ನ್ಯಾಯಾಂಗ ಬಂಧನ ಪರಿಶೀಲಿಸಿ ಜಾಮೀನು ಮಂಜೂರು ಮಾಡಲಾಗುತ್ತಿದೆ.‌ ಆರೋಪಿಯು ಒಂದು ಲಕ್ಷ ರು. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ಸ್ಥಳೀಯ ನಿವಾಸಿಗಳ ಭದ್ರತಾ ಖಾತರಿ ಒದಗಿಸಬೇಕು ಎಂಬುದು ಸೇರಿ ವಿವಿಧ ಷರತ್ತು ವಿಧಿಸಿದೆ.


ಅಲ್ಲದೆ, ಜಾಮೀನು ಮಂಜೂರು ಮಾಡಿರುವುದು ಆರೋಪಿಯ ನಿರ್ದೋಷಿತ್ವ ಸಾಬೀತುಪಡಿಸುವುದಿಲ್ಲ. ಪ್ರಕರಣದ ವಿಚಾರಣೆ ಮುಂದುವರಿಯಲಿದೆ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ಅಂತಿಮ ತೀರ್ಮಾನವನ್ನು ವಿಚಾರಣಾ ನ್ಯಾಯಾಲಯವೇ ಕೈಗೊಳ್ಳಲಿದೆ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಸಂತ್ರಸ್ತೆಯಾಗಿರುವ ಮಹಿಳೆಯು ತನ್ನ ಮಾನವನಿಂದ ಲೈಂಗಿಕ ದೌರ್ಜನ್ಯ, ಪತಿ, ಅತ್ತೆ ಹಾಗೂ ಅಜ್ಜಿಯಿಂದ ಕಿರುಕುಳ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಮಾವನ, ಅತ್ತೆಯ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಗೆ 75 ವರ್ಷ ವಯಸ್ಸಾಗಿದೆ. ಹಿರಿಯ ನಾಗರಿಕರಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ಆರೋಪ ಸಂಬಂಧ ದೂರಿನ ದಿನಾಂಕ, ಸಮಯವನ್ನು ಉಲ್ಲೇಖಿಸಿಲ್ಲ. ಘಟನೆಗೆ ಪ್ರತ್ಯಕ್ಷ್ಯ ಸಾಕ್ಷಿಗಳಿಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.