ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ಅಕ್ರಮವಾಗಿ ವಾಸವಾಗಿದ್ದಾರೆ. ಕೋಳಿ ಫಾರಂ, ಫೀಡ್ಸ್ ಕಾರ್ಖಾನೆ, ಕೈಗಾರಿಕಾ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಮೂಲ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ದೂರು ನೀಡಿದ್ದಾರೆ.

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಅವರು, ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕರಡಹಳ್ಳಿ ಗ್ರಾಪಂ ವ್ಯಾಪ್ತಿಯ ಯಗಟಿ ಗೇಟ್ ಬಳಿಯ ಒಂದು ಕೋಳಿ ಫಾರಂ ಘಟಕ ಹಾಗೂ ಹುಳ್ಳೇನಹಳ್ಳಿ ಗೇಟ್ ಬಳಿಯ ಎಸ್.ಎಂ.ಸ್ಟಾರ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್‌ನ ಒಂದು ಘಟಕ, ದೇವಲಾಪುರ ಗ್ರಾಮಕ್ಕೆ ಹೋಗುವ ರಸ್ತೆ ಬಳಿ ತಟ್ಟಹಳ್ಳಿ ಗ್ರಾಮ-ಎಚ್.ಎನ್.ಕಾವಲ್ ನಡುವೆ ಸ್ಟಾರ್ ಕಂಪನಿಯ ಕೋಳಿ ಫಾರಂ ಘಟಕ, ಮಂಡ್ಯ-ನಾಗಮಂಗಲ ರಸ್ತೆಯಿಂದ ಗದ್ದೆಭೂವನಹಳ್ಳಿ ರಸ್ತೆಯಲ್ಲಿ ಹತ್ತಾರು ಕೋಳಿ ಫಾರಂ ಹಾಗೂ ಕೈಗಾರಿಕಾ ಘಟಕಗಳಿದ್ದು ಅದರಲ್ಲಿ ಕೆಲವು ಘಟಕಗಳಿಗೆ ನಾಮಫಲಕವಿಲ್ಲ. ಇಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಮೂಲ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಾಗಮಂಗಲ-ಮೈಸೂರು ರಸ್ತೆಯ ಎ.ಶ್ರೀರಾಮನಹಳ್ಳಿಯ ಬಳಿ ೧೭ ಎಕರೆ ವ್ಯಾಪ್ತಿಯಲ್ಲಿ ಕೋಳಿ ಫಾರಂ ಘಟಕಗಳಿವೆ. ಇವೆಲ್ಲವೂ ೬೦೦ ರಿಂದ ೭೦೦ ಎಕರೆ ಪ್ರದೇಶದ ವಿಸ್ತೀರ್ಣದಲ್ಲಿವೆ. ಇಲ್ಲಿರುವ ಫೀಡ್ಸ್, ಕೋಳಿ ಫಾರಂ ಹಾಗೂ ಇತರೆ ಘಟಕಗಳಲ್ಲಿ ಬಾಂಗ್ಲಾ ದೇಶದ ವಲಸಿಗರು ಉತ್ತರ ಭಾರತದ ಹಲವು ರಾಜ್ಯಗಳ ವಾಸಿಗಳಂತೆ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಏಜೆಂಟರ ಮೂಲಕ ಅಕ್ರಮವಾಗಿ ಸೃಷ್ಟಿಸಿಕೊಂಡು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಂಗ್ಲಾ ದೇಶದ ವಲಸಿಗರು ನಾಗಮಂಗಲ ತಾಲೂಕಿನಲ್ಲಿ ನೆಲೆಸಿದ ನಂತರ ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮು ಘರ್ಷಣೆ ಹಾಗೂ ಮದ್ದೂರು ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ಕೋಮುಗಲಭೆ ನಡೆಯಲು ಇವರು ಕೂಡ ಕಾರಣಕರ್ತರಾಗಿರುವ ಅನುಮಾನವಿದ್ದು ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.


ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಕೋಳಿ ಫಾರಂ, ಫೀಡ್ಸ್ ಕಾರ್ಖಾನೆ, ಇತರೆ ಕೈಗಾರಿಕಾ ಘಟಕಗಳ ಮಾಲೀಕರು ಸ್ಟಾರ್ ಗ್ರೂಪ್ ಎಂಬ ಹೆಸರಿನಡಿ ಕಂಪನಿ, ಕೈಗಾರಿಕೆ ನಡೆಸುತ್ತಿದ್ದಾರೆ. ಈ ಹಿಂದೆ ಕಂಪನಿಯ ಮೂಲ ಮಾಲೀಕರು ಸಕಲೇಶಪುರ, ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳೂರು ಪೆಟ್ರೋಲಿಯಂ ಲಿಮಿಟೆಡ್‌ನ ಇಂಧನ ಪೂರೈಸುವ ಪೈಪ್‌ಲೈನ್‌ನಿಂದ ಇಂಧನ ಕದಿಯುತ್ತಿದ್ದು, ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅದರ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದಿದ್ದಾರೆ.

ಪ್ರಸ್ತುತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಈ ಸಮಯದಲ್ಲಿ ಬಾಂಗ್ಲಾದೇಶದ ವಲಸಿಗರ ಮೂಲ ದಾಖಲೆಗಳನ್ನು (ಜನನ ಪ್ರಮಾಣಪತ್ರ, ಶಾಲೆಗೆ ಸೇರಿದ ಮೂಲ ದಾಖಲಾತಿ) ಉತ್ತರ ಭಾರತದ ಹಲವಾರು ರಾಜ್ಯಗಳ ವಾಸಿಗಳೆಂದು ಬಂದಿರುವುದಕ್ಕೆ ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ತುರ್ತು ಅಗತ್ಯವಿದೆ. ಅಕ್ರಮ ದಾಖಲೆಗಳ ಕುರಿತಂತೆ ಪರಿಶೀಲನೆ ನಡೆಸಿ ಬಾಂಗ್ಲಾ ವಲಸಿಗರೆಂದು ಕಂಡುಬಂದರೆ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಏಜೆಂಟರು, ಕಾರ್ಖಾನೆ, ಕೂಲಿ ಕಾರ್ಮಿಕರಾಗಿ ನೇಮಿಸಿಕೊಂಡಿರುವ ಕೋಳಿ ಫಾರಂ, ಕೈಗಾರಿಕೆ ಘಟಕಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.ನಾಗಮಂಗಲದಲ್ಲಿ ಬಾಂಗ್ಲಾದೇಶಿಯರು ಇಲ್ಲ: ಎಸ್ ಪಿ

ಕನ್ನಡಪ್ರಭ ವಾರ್ತೆ ಮಂಡ್ಯನಾಗಮಂಗಲದಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿದಾರರೊಬ್ಬರು ಮೌಖಿಕವಾಗಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು ಅಲ್ಲಿ ಯಾವುದೇ ಬಾಂಗ್ಲಾದೇಶದವರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಸ್ಪಷ್ಟಪಡಿಸಿದ್ದಾರೆ.

ನಾಗಮಂಗಲದ ಸ್ಟಾರ್ ಚಿಕನ್ ಸಂಸ್ಥೆಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ನಾಗಮಂಗಲ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಉತ್ತರ ಭಾರತದ ಹಲವು ಮಂದಿ ಅಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.ಪಶ್ಚಿಮ ಬಂಗಾಳ 81, ಉತ್ತರ ಪ್ರದೇಶ 2, ಬಿಹಾರ 19, ಅಸ್ಸಾಂ 9, ಒಡಿಸಾ 24, ಮಧ್ಯ ಪ್ರದೇಶ 2, ಛತ್ತೀಸ್ ಗಡ ರಾಜ್ಯದ 9 ಮಂದಿ ಕೂಲಿ ಕೆಲಸಕ್ಕಾಗಿ ಅಲ್ಲಿಗೆ ಬಂದಿದ್ದಾರೆ. ಇವರೆಲ್ಲರ ಆಧಾರ್ ಕಾರ್ಡ್ ಗಳನ್ನು ಪರಿಶೀಲನೆ ನಡೆಸಲಾಗಿದ್ದು ಅವರೆಲ್ಲರೂ ಆಯಾ ರಾಜ್ಯಗಳಿಂದ ಬಂದಿರುವವರೇ ಆಗಿದ್ದಾರೆ. ಆಧಾರ್ ಕಾರ್ಡ್ ಮಾಹಿತಿ ಹಾಗೂ ಗುಪ್ತ ಮಾಹಿತಿ ಸಂಗ್ರಹದಿಂದ ಅಲ್ಲಿ ಯಾವುದೇ ಬಾಂಗ್ಲಾದೇಶೀಯರು ಇರುವುದು ಕಂಡುಬಂದಿಲ್ಲ ಎಂದು ಖಚಿತಪಡಿಸಿದ್ದಾರೆ.

ನಾಗಮಂಗಲ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಇತರೆ ಸಂಸ್ಥೆಗಳಲ್ಲೂ ಕೂಡ ಹೊರ ರಾಜ್ಯದ ಕೂಲಿಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಹೊರತು ಬಾಂಗ್ಲಾದೇಶಿಯರು ನೆಲೆಸಿರುವುದಿಲ್ಲ ಈ ಬಗ್ಗೆ ಪೊಲೀಸರು ತೀವ್ರ ನಿಗಾ ವಹಿಸಿರುವುದಾಗಿ ತಿಳಿಸಿದ್ದಾರೆ.