ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಜಿಲ್ಲೆಯಲ್ಲಿ ಇತ್ತಿಚೀಗೆ ಪೌಷ್ಟಿಕ ಹಾಲಿನ ಪುಡಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಸುದ್ದಿ ಮರೆಮಾಚುವ ಮುನ್ನ ಮತ್ತೊಂದು ಘಟನೆ ನಾಗರೀಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಬೇಕಾದ 50 ಸಾವಿರಕ್ಕೂ ಅಧಿಕ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಶಿಕ್ಷಣ ಇಲಾಖೆಯ ಕಾರ್ಯವೈಖರಿ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಗುರುಗುಂಟಾದ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಪ್ತಾಹಿಕ ಕಬ್ಬಿಣ ಮತ್ತು ಪೊಲೀಕ್ ಆಮ್ಲ ಕಾರ್ಯ ಕ್ರಮದಡಿ ಮಕ್ಕಳಿಗೆ ವಿತರಿಸಬೇಕಾದ ಮಾತ್ರೆಗಳನ್ನು ಶಾಲೆಯ ಶೌಚಾಲಯದಲ್ಲಿ ಎಸೆದಿದ್ದಾರೆ.ಮಾಹಿತಿ ತಿಳಿದು ಜುಲೈ 16ರಂದು ಸ್ಥಳಕ್ಕೆ ಭೇಟಿ ನೀಡಿದ ವರ್ಗಾವಣೆಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಶೌಚಾಲಯದಲ್ಲಿ ಬಿಸಾಕಿದ್ದ 50 ಸಾವಿರಕ್ಕೂ ಅಧಿಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾತ್ರೆಗಳು ಡಬ್ಲೂಐಎಫ್ಎಸ್ ಮಾತ್ರೆಗಳಾದ ಪಿಂಕ್ ಮತ್ತು ಬ್ಲೂ ಅಕ್ಟೋಬರ್ 15ರಿಂದ ಸೆಪ್ಟೆಂಬರ್ 17ವರೆಗೆ ಅವಧಿ ಹೊಂದಿದ್ದು, ಬ್ಯಾಚ್ ಸಂಖ್ಯೆ ಐಎಫ್ಓ 039 ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಅಂದಾಜು 50 ಸಾವಿರಕ್ಕೂ ಅಧಿಕ ಮಾತ್ರೆಗಳು ಇವೆ. ವಶಕ್ಕೆ ಪಡೆದ ಮಾತ್ರೆ ಗಳನ್ನು ಮುಂದಿನ ಆದೇಶದವರೆಗೂ ಗುರುಗುಂಟಾದಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಇರಿಸಲಾಗಿದೆ. ಉರ್ದು ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ತಾಹೀರಾ ಬೇಗಂ, ಶಿಕ್ಷಕರಾದ ಮೌಲಾಬಿ ಪಟೇಲ್, ಸುವರ್ಣ, ಉಬೇದುಲ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ. ಬಂದೇನವಾಜ್ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಂದೇನವಾಜ್ ಸಮ್ಮುಖದಲ್ಲಿ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡದೇ ಶೌಚಾಲಯದಲ್ಲಿ ಬೇಕಾಬಿಟ್ಟಿ ಎಸೆದ ಪ್ರಕರಣ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.
ಆರೋಗ್ಯ ಕೇಂದ್ರದಿಂದ ನೋಟಿಸ್: ಗುರುಗುಂಟಾದ ಉನ್ನತೀಕರಿಸಿದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಬೇಕಾದ ಐರನ್ ಮಾತ್ರೆಗಳು ಶಾಲೆ ಆವರಣದ ಶೌಚಾಲಯದಲ್ಲಿ ಬಿಸಾಡಲು ಕಾರಣ ಹಾಗೂ ಮಕ್ಕಳಿಗೆ ಮಾತ್ರೆಗಳು ಏಕೆ ವಿತರಣೆ ಮಾಡಿಲ್ಲ? ಎಂದು ಗುರು ಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ 13-07-2026ರಂದು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಬಿಇಒ ನೋಟಿಸ್ ಜಾರಿ: ತಾಲೂಕಿನ ಗುರುಗುಂಟಾದಲ್ಲಿರುವ ಸರ್ಕಾರಿ ಉರ್ದು ಉನ್ನತೀಕರಿಸಿದ ಶಾಲೆಯಲ್ಲಿ ಮಾತ್ರೆಗಳು ಶೌಚಾಲಯದಲ್ಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕರು ಒಳಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
---ಕೋಟ್: 1
ಗುರುಗುಂಟಾದ ಸರ್ಕಾರಿ ಉನ್ನತೀಕರಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಬೇಕಾದ ಐರನ್ ಮಾತ್ರೆ ಗಳನ್ನು ಆವರಣದ ಶೌಚಾಲಯದಲ್ಲಿ ಎಸೆಯಲಾದ ಪ್ರಕರಣ ಈ ಹಿಂದೆ ಇದ್ದ ಆರೋಗ್ಯಾಧಿಕಾರಿಗಳು ಪತ್ತೆ ಮಾಡಿ ವರದಿ ನೀಡಿದ್ದಾರೆ. ಈಗ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು- ಡಾ.ಹನುಮಂತಪ್ಪ ತಳ್ಳಳ್ಳಿ. ತಾಲೂಕು ಆರೋಗ್ಯಾಧಿಕಾರಿ ಲಿಂಗಸುಗೂರು
---ಕೋಟ್: 2
“ಗುರುಗುಂಟಾದ ಉರ್ದು ಶಾಲೆಯ ಮಕ್ಕಳಿಗೆ ನೀಡಬೇಕಾದ ಐರನ್ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಶಿಕ್ಷಕರಿಂದ ಉತ್ತರ ಪಡೆದು ಮುಂದಿನ ಕ್ರಮ ವಹಿಸಲಾಗುವುದು”.- ಸುಜಾತ ಹುನೂರು, ಬಿಇಒ, ಲಿಂಗಸುಗೂರು.
---21ಕೆಪಿಎಲ್ಎನ್ಜಿ02 : ಲಿಂಗಸುಗೂರು ತಾಲೂಕಿನ ಗುರುಗುಂಟಾದ ಸರ್ಕಾರಿ ಉನ್ನತೀಕರಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಆರೋಗ್ಯ ಇಲಾಖೆ ವಶಪಡಸಿಕೊಂಡ 50ಸಾವಿರಕ್ಕೂ ಅಧಿಕ ಐರನ್ ಮಾತ್ರೆಗಳು
21ಕೆಪಿಎಲ್ಎನ್ಜಿ03 : ಲಿಂಗಸುಗೂರು ತಾಲೂಕಿನ ಗುರುಗುಂಟಾದ ಸರ್ಕಾರಿ ಉನ್ನತೀಕರಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಎಸೆದ ಐರನ್ ಮಾತ್ರೆಗಳು21ಕೆಪಿಎಲ್ಎನ್ಜಿ04 : ಶೌಚಾಲಯದಲ್ಲಿ ಬಿಸಾಡಿದ ಐರನ್ ಮಾತ್ರೆಗಳ ಪ್ರಕರಣ ಬಗ್ಗೆ ಗುರುಗುಂಟಾದ ಸರ್ಕಾರಿ ಉರ್ದು ಶಾಲೆ ಶಿಕ್ಷಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಕಾರಣ ಕೇಳಿ ನೀಡಿದ ನೋಟಿಸ್.