ಸಾರಾಂಶ
ಕಂಪ್ಲಿ: ರಾಜ್ಯ ಸರ್ಕಾರದ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ವಸತಿ ರಹಿತ ವಿಶ್ವಕರ್ಮ ಸಮುದಾಯದ ಕುಟುಂಬಗಳಿಗೆ ವಸತಿ ಕಲ್ಪಿಸಲು ಶೀಘ್ರದಲ್ಲೇ ನೂತನ ಯೋಜನೆ ಜಾರಿಗೊಳಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಹೇಳಿದರು.
ಪಟ್ಟಣದ ಕಾಳಿಕಮಠೇಶ್ವರ ದೇವಾಲಯದಲ್ಲಿ ಬುಧವಾರ ನಡೆದ ವಿಶ್ವಕರ್ಮ ಸಮಾಜ ಸಂಘದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.ವಿಶ್ವಕರ್ಮ ನಿಗಮದ ಮೂಲಕ ಸಾಮಾಜಿಕ, ಆರ್ಥಿಕ, ವಸತಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ.ವಿಶ್ವಕರ್ಮರು ಪಾರಂಪರಿಕ ಪಂಚ ಕಸಬುಗಳಾದ ಕಂಬಾರಿಕೆ, ತಕ್ಕಡು, ಬಂಗಾರದ ಕೆಲಸ, ಕಲ್ಲುಕಡಿತ ಮತ್ತು ಶಿಲ್ಪಕಲೆಯ ಜೊತೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಪ್ರಾಮುಖ್ಯತೆ ನೀಡಬೇಕು. ಶಿಕ್ಷಣ, ಕೌಶಲ್ಯ ಅಭಿವೃದ್ಧಿಯೇ ನಮ್ಮ ಸಮುದಾಯದ ಶಕ್ತಿ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ನಿಗಮದ ಅಭಿವೃದ್ಧಿಗೆ ₹100 ಕೋಟಿಗಳ ಅನುದಾನ ನೀಡುವಂತೆ ಸಿಎಂ ಅವರಿಗೆ ವಿನಂತಿ ಸಲ್ಲಿಸಲಾಗುವುದು. ಜತೆಗೆ ಕಂಪ್ಲಿಯ ಕಾಳಿಕಾ ವಿದ್ಯಾಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಸಹಕಾರ ನೀಡಲಾಗುವುದು ಎಂದೂ ಭರವಸೆ ನೀಡಿದರು.
ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಸಹಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಚಿನ್ನ ಮತ್ತು ಬೆಳ್ಳಿ ವೃತ್ತಿಯಲ್ಲಿ ತೊಡಗಿರುವ ಶಿಲ್ಪಿಗಳಿಗೆ ವೃತ್ತಿ ತೊಂದರೆಗಳನ್ನು ನಿವಾರಿಸಲು ಹಾಗೂ ಸಾಲ, ವಸತಿ, ನಿವೇಶನ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸುವಲ್ಲಿ ನಿಗಮ ಮುಂದಾಗಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾಮನಿರ್ದೇಶನ ಸದಸ್ಯ ಶ್ರೀಧರಗಡ್ಡೆ ಚಂದ್ರಶೇಖರಾಚಾರ್, ಸಮಾಜದ ತಾಲೂಕು ಅಧ್ಯಕ್ಷ ಡಿ.ಎ. ರುದ್ರಪ್ಪಾಚಾರ್, ಮಹಿಳಾ ಘಟಕದ ಅಧ್ಯಕ್ಷೆ ಡಿ.ವೀಣಾ ಮೌನೇಶ, ಪ್ರಮುಖರಾದ ಚಂದ್ರಶೇಖರಾಚಾರ್, ಗುರುಮೂರ್ತಿ, ಕಾಳಾಚಾರ್, ಶಶಿಧರ, ರಾಘವೇಂದ್ರ, ನಾರಾಯಣಾಚಾರ್, ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.