ಸಾರಾಂಶ
ಬೆಂಗಳೂರು : ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೃತನ ಪತ್ನಿ ಹಾಗೂ ಕುಟುಂಬದವರನ್ನು ಮಾರತ್ತಹಳ್ಳಿ ಪೊಲೀಸರು ಮಾಧ್ಯಮಗಳ ಕಣ್ತಪ್ಪಿಸಿ ಕುತೂಹಲಕಾರಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಒಂದೇ ಒಂದು ಫೋನ್ ಕರೆ ಆರೋಪಿಗಳು ಖಾಕಿ ಬಲೆ ಬೀಳಲು ಕಾರಣವಾಗಿದೆ.
ಅತುಲ್ ಆತ್ಮಹತ್ಯೆ ಬಳಿಕ ವ್ಯಕ್ತವಾದ ಜನಾಕ್ರೋಶದಿಂದ ಭೀತಿಗೊಂಡ ಮೃತನ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರು ರಾತ್ರೋರಾತ್ರಿ ಮನೆ ತೊರೆದು ನಾಪತ್ತೆಯಾಗಿದ್ದರು. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಪ್ರಸ್ತಾಪವಾಯಿತು. ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿರುವ ಟೆಕಿ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾರತ್ತಹಳ್ಳಿ ಠಾಣೆ ಪೊಲೀಸರು, ಆರೋಪಿಗಳ ಬಂಧನವನ್ನು ತೀರಾ ಪ್ರತಿಷ್ಠೆಯಾಗಿ ತೆಗೆದುಕೊಂಡರು.
ಈ ಹಿನ್ನಲೆಯಲ್ಲಿ ಮಾರತ್ತಹಳ್ಳಿ ಇನ್ಸ್‌ಪೆಕ್ಟರ್ ಪಿ.ಎನ್.ಅನಿಲ್ ಕುಮಾರ್ ಉಸ್ತುವಾರಿಯಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ರಂಜಿತ್, ಚೇತನ್, ಜ್ಞಾನದೇವ ಹಾಗೂ ವಿದ್ಯಾ ಅವರ ಸಾರಥ್ಯದಲ್ಲಿ ಪ್ರತ್ಯೇಕವಾಗಿ 4 ತಂಡಗಳು ರಚನೆಗೊಂಡವು. ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ 4 ತಂಡಗಳು ಗೌಪ್ಯವಾಗಿ ಕಾರ್ಯಾಚರಣೆಗಳಿದ್ದವು. ಸತತ 5 ದಿನಗಳು ತಾಂತ್ರಿಕ ಮಾಹಿತಿ ಹಾಗೂ ಪಕ್ಕಾ ಪೊಲೀಸಿಂಗ್ ಮೆಥೇಡ್ ಬಳಸಿ ನಡೆಸಿದ ಪತ್ತೆದಾರಿಕೆ ಕೊನೆಗೂ ಫಲ ನೀಡಿ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.
ಮಾಧ್ಯಮಕ್ಕೆ ಕಾಣಿಸದಂತೆ ಪ್ಲಾನ್:
ಟೆಕಿ ಅತುಲ್ ಆತ್ಮಹತ್ಯೆ ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದ್ದರಿಂದ ಸಹಜವಾಗಿ ಆರೋಪಿಗಳು ಹಾಗೂ ಪೊಲೀಸರ ಹಿಂದೆ ಮಾಧ್ಯಮಗಳು ಬಿದ್ದವು. ತಮ್ಮ ತನಿಖೆಯ ಪ್ರತಿ ಹಂತದ ಸಂಗತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಆರೋಪಿಗಳು ವರದಾನವಾಗುತ್ತಿದೆ ಎಂದು ತಿಳಿದ ಅಧಿಕಾರಿಗಳು, ತಮ್ಮ ಕಾರ್ಯಾಚರಣೆ ದಿಕ್ಕು ಬದಲಿಸಲು ನಿರ್ಧರಿಸಿದರು. ಆಗ ಉತ್ತರಪ್ರದೇಶದ ಜೌನ್‌ಪುರದಲ್ಲಿರುವ ಅತುಲ್ ಪತ್ನಿ ತವರು ಮನೆಗೆ ಪಿಎಸ್‌ಐ ರಂಜಿತ್ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ಕಳುಹಿಸಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂತೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೋಡಿಕೊಂಡರು. ಪೊಲೀಸರ ಪೂರ್ವಯೋಜಿತದಂತೆ ಜೌನ್‌ಪುರದ ವಿಶೇಷ ತಂಡವನ್ನು ಸ್ಥಳೀಯ ಮಾಧ್ಯಮಗಳು ಹಿಂಬಾಲಿಸಿದವು.
ತಕ್ಷಣ ಚುರುಕುಗೊಂಡ ಪಿಐ ಅನಿಲ್ ಕುಮಾರ್, ಇನ್ನುಳಿದ ಪಿಎಸ್‌ಐಗಳಾದ ಜ್ಞಾನದೇವ್, ವಿದ್ಯಾ ಹಾಗೂ ಚೇತನ್ ಸಾರಥ್ಯದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿದರು. ಈ ತಂಡವು ಅತುಲ್ ಪತ್ನಿ ನಿಖಿತಾ ಹಾಗೂ ಆಕೆಯ ಸಂಬಂಧಿಕರ ಸಂಪರ್ಕವನ್ನು ಜಾಲಾಡಲು ಹರಿಯಾಣ ರಾಜ್ಯದ ಗುರ್‌ಗಾವ್, ದೆಹಲಿ ಹಾಗೂ ಉತ್ತರಪ್ರದೇಶದ ಅಲಹಬಾದ್ ನಗರಗಳಲ್ಲಿ ಫೀಲ್ಡ್‌ಗಿಳಿದವು. ಈ ವಿಶೇಷ ತಂಡಗಳಿಗೆ ಸ್ಥಳೀಯ ಪೊಲೀಸರು ಕೂಡ ಸಹಕರಿಸಿದರು. ಉತ್ತರಪ್ರದೇಶದ ಜೌನ್‌ಪುರದ ಮನೆ ತೊರೆದ ಬಳಿಕ ನಿಖಿತಾ ಹಾಗೂ ಆಕೆಯ ಪೋಷಕರು ಮೊಬೈಲ್‌ಗಳನ್ನು ಸ್ವಿಚ್ಛ್ ಆಫ್ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ನೂರಾರು ಮೊಬೈಲ್, ಸಿಸಿಟಿವಿ ಪರಿಶೀಲನೆ:
ಆರೋಪಿಗಳ ಬೆನ್ನಹತ್ತಿದ್ದ ಮಾರತ್ತಹಳ್ಳಿ ಠಾಣೆ ಪೊಲೀಸರ ವಿಶೇಷ ತಂಡಗಳು, ಹರಿಯಾಣ ಹಾಗೂ ಉತ್ತರಪ್ರದೇಶಗಳಲ್ಲಿ ನೂರಾರು ಮೊಬೈಲ್‌ಗಳ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಈ ತಾಂತ್ರಿಕ ಮಾಹಿತಿಯಿಂದ ನಿಖಿತಾ ಹಾಗೂ ಆಕೆಯ ಪೋಷಕರು ಪ್ರತ್ಯೇಕವಾಗಿ ತಲೆಮರೆಸಿಕೊಂಡಿರುವುದು ಪೊಲೀಸರಿಗೆ ಖಚಿತವಾಗಿದೆ. ಅಷ್ಟರಲ್ಲಿ ಅಲಹಬಾದ್ ನ್ಯಾಯಾಲಯಕ್ಕೆ ಆರೋಪಿಗಳು ನಿರೀಕ್ಷಣಾ ಜಾಮೀನು ಸಲ್ಲಿಸುವ ಬಗ್ಗೆ ಬಾತ್ಮಿ ಪೊಲೀಸರಿಗೆ ಲಭ್ಯವಾಯಿತು. ತಕ್ಷಣವೇ ಚುರುಕಾದ ಪೊಲೀಸರು, ಆರೋಪಿಗಳ ಸಂಪರ್ಕ ಜಾಲವನ್ನು ಮತ್ತೆ ಶೋಧಿಸಿದ್ದಾರೆ.
ಬಂಧುಗಳ ಕರೆ ನೀಡಿದ ಸುಳಿವು:
ಅದೇ ವೇಳೆ ಜಾಮೀನು ಅರ್ಜಿ ಸಲ್ಲಿಕೆ ಸಂಬಂಧ ನಿಖಿತಾ ಹಾಗೂ ಆಕೆಯ ತಾಯಿ ನಿಶಾ ಅವರನ್ನು ಅವರ ಸಂಬಂಧಿಕರು ಸಂಪರ್ಕಿಸುತ್ತಾರೆ ಎಂದು ಗ್ರಹಿಸಿದ ಪೊಲೀಸರು, ಕೂಡಲೇ ಆ ಇಬ್ಬರ ಮೊಬೈಲ್ ಕರೆಗಳ ಮೇಲೆ ನಿಗಾವಹಿಸಿದರು. ಅಲ್ಲದೆ ತಲೆಮರೆಸಿಕೊಂಡ ಬಳಿಕ ರಿಗ್ಯುಲರ್ ಕರೆ ಮಾಡದೆ ವಾಟ್ಸಪ್ ಕರೆಗಳ ಮೂಲಕವೇ ತನ್ನ ಸಂಬಂಧಿಕರು ಹಾಗೂ ವಕೀಲರ ಜತೆ ನಿಖಿತಾ ಹಾಗೂ ಆಕೆಯ ಕುಟುಂಬದವರು ಸಂವಹನ ನಡೆಸಿದ್ದರು. ಹೀಗಾಗಿ ಆರೋಪಿಗಳ ಜಾಡು ಹಿಡಿಯುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಜಾಮೀನು ಅರ್ಜಿಗೆ ಸಹಿ ಪಡೆಯಲು ಆರೋಪಿಗಳಿಗೆ ಬಂಧುಗಳು ಕರೆ ಮಾಡಬಹುದು ಎಂದು ಪೊಲೀಸರು ಅಂದಾಜಿಸಿದ್ದು ಕೊನೆಗೆ ಫಲ ನೀಡಿತು. ತನ್ನ ಸಂಬಂಧಿಗೆ ಶುಕ್ರವಾರ ರಾತ್ರಿ ನಿಖಿತಾ ಕರೆ ಮಾಡಿ ಮಾತನಾಡಿದ್ದಳು. ಈ ಕರೆ ನೀಡಿದ ಸುಳಿವು ಆಧರಿಸಿ ಕೂಡಲೇ ಕಾರ್ಯಾಚರಣೆಗಿಳಿದಾಗ ಹರಿಯಾಣದ ಗುರ್‌ಗಾವ್ ಪಿಜಿಯಲ್ಲಿ ನಿಖಿತಾ ಹಾಗೂ ಉತ್ತರಪ್ರದೇಶದ ಅಲಹಬಾದ್‌ನ ರಾಮೇಶ್ವರ ಇನ್ ಹೋಟೆಲ್‌ನಲ್ಲಿ ನಿಖಿತಾ ತಾಯಿ ನಿಶಾ ಹಾಗೂ ಸಹೋದರ ಅನುರಾಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.