ಸಾರಾಂಶ
ನಾಗಮಂಗಲ : ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಸೋಮವಾರ ದಾಳಿ ನಡೆಸಿರುವ ಬೆಂಗಳೂರು ಮತ್ತು ಮೈಸೂರು ವಿಭಾಗದ ಅರಣ್ಯ ಇಲಾಖೆ ಜಾಗೃತ ದಳದ ಅಧಿಕಾರಿಗಳ ತಂಡ 3 ಕೋಟಿ ರು. ಮೌಲ್ಯದ ತಿಮಿಂಗಲ ವಾಂತಿ ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದೆ.
ಪಟ್ಟಣದ ಪಡುವಲಪಟ್ಟಣ ರಸ್ತೆ ಶ್ರೀ ಬಡಗೂಡಮ್ಮದೇವಿ ದೇವಸ್ಥಾನ ಪಕ್ಕದ ವಾಸಿ ಲೇಟ್ ಚಲುವರಾಜು ಪುತ್ರ ವಿನಯ್‌ಕುಮಾರ್(31) ವಶವಾದ ವ್ಯಕ್ತಿ. ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ಈತ ಕಳೆದ 3 ತಿಂಗಳಿಂದ ಪಾರ್ಲರ್ ಮುಚ್ಚಿದ್ದ. ಈತನ ಚಲನವಲನದ ಮೇಲೆ 15 ದಿನಗಳಿಂದ ಅರಣ್ಯ ಇಲಾಖೆ ಜಾಗೃತ ದಳ ಸಿಬ್ಬಂದಿ ನಿಗಾ ವಹಿಸಿ ಇಲ್ಲೆಯೇ ಬೀಡು ಬಿಟ್ಟಿದ್ದರೆನ್ನಲಾಗಿದೆ.
ಈ ದಂಧೆಯ ಮೂಲ ಜಾಡು ಕಂಡು ಹಿಡಿಯಲು ಆರೋಪಿ ಅಜ್ಞಾಕ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಿಮಿಂಗಲ ವಾಂತಿ 1972ರ ವನ್ಯಜೀವಿ ಕಾಯ್ದೆಯಡಿ ದೇಶದಲ್ಲಿ ನಿಷೇಧಿಸಲಾಗಿದೆ. ತಿಮಿಂಗಲ ಸೇವಿಸುವ ಕೆಲ ಆಹಾರ ಜೀರ್ಣಿಸಿಕೊಳ್ಳಲಾಗದೆ ಮತ್ತೆ ಹೊರ ಹಾಕುತ್ತದೆ. ಇದನ್ನು ಅಂಬರ್ ಗ್ರೀಸ್ ಅಥವಾ ತಿಮಿಂಗಲ ವಾಂತಿ ಎನ್ನುತ್ತಾರೆ. ಈ ದ್ರವರೂಪದ ಗಟ್ಟಿ ಆಹಾರ ಮೊದಲು ಸಮುದ್ರದ ಆಳದಲ್ಲಿರುತ್ತದೆ. ಬಳಿಕ ಕೆಲ ರಾಸಾಯನಿಕ ಕ್ರಿಯೆ ಮೂಲಕ ಸಮುದ್ರದ ಮೇಲ್ಭಾಗದಲ್ಲಿ ತೇಲುತ್ತದೆ. ಹೊರದೇಶಗಳಲ್ಲಿ ಸುಗಂಧ ದ್ರವ್ಯ ತಯಾರಿಕೆ, ಚಾಕೋಲೆಟ್ ಹಾಗೂ ಕೆಲ ಔಷಧಗಳಿಗೆ ಬಳಸುತ್ತಿದ್ದು, 1 ಕೆ.ಜಿ.ಗೆ 1 ಕೋಟಿ ರು. ಮೌಲ್ಯವಿದೆ ಎನ್ನಲಾಗಿದೆ.