ಕೆ.ಆರ್.ಪೇಟೆ:

ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೋರವಲಯದ ಶ್ರೀಚೌಡೇಶ್ವರಿ ದೇವಾಲಯದ ಬಳಿಯ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಪಟ್ಟಣದ ಸ್ಕಾಲರ್ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಮನ್ (17) ಸ್ಥಳದಲ್ಲಿಯೇ ಮೃತಪಟ್ಟ ವಿದ್ಯಾರ್ಥಿ. ಆತನ ಗೆಳೆಯ ಮಾರುಫ್ (16) ಗಂಭೀರವಾಗಿ ಗಾಯಗೊಂಡವರು.

ಪಟ್ಟಣದ ಹೊರವಲಯದ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ.

ಬೈಕ್ ಸವಾರ ಬಾಲಕ ಹರ್ಮನ್ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬ ಬಾಲಕ ಮಾರುಫ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಕ್ರಮಕ್ಕೆ ಸಾರ್ವಜನಿಕರ ಆಗ್ರಹ:

ಕಾಲೇಜಿಗೆ ಹೋಗಬೇಕಾದ ಬಾಲಕ ಸಾವಿನ ಮನೆ ಸೇರಿದ್ದು, ವಿದ್ಯಾರ್ಥಿಯ ಸಾವಿನಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರು ಹೆಚ್ಚಾಗಿ ವಾಹನಗಳನ್ನು ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸುವುದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು-ಜಲಸೂರು ಹೆದ್ದಾರಿಯ ಚೌಡೇಶ್ವರಿ ದೇವಾಲಯದ ಬಳಿ ವಾಹನಗಳ ವೇಗ ಹೆಚ್ಚಾಗಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಶಾಲಾ-ಕಾಲೇಜು ಸುತ್ತಮುತ್ತಲೂ ಅಪ್ರಾಪ್ತರು ಬೈಕ್ ಮತ್ತು ಸ್ಕೂಟಿ ಮುಂತಾದ ದ್ವಿಚಕ್ರ ವಾಹನಗಳಲ್ಲಿ ಅತಿ ವೇಗವಾಗಿ ಹೋಗುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡುವುದು ನಡೆಯುತ್ತಿದೆ. ವೇಗ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.