ಕನ್ನಡಪ್ರಭ ವಾರ್ತೆ ಮದ್ದೂರು

ಏರ್ ಕೂಲರ್ ಟ್ಯಾಂಕ್ ಸಿಡಿದು ಮೈಸೂರು ಮೂಲದ ಓರ್ವ ಮೆಕಾನಿಕ್ ಮೃತಪಟ್ಟು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.

ಮೈಸೂರು ಗೌಸಿಯಾ ನಗರದ ಮಹಮದ್ ಸಾಧಿಕ್ (22) ಮೃತಪಟ್ಟ ವ್ಯಕ್ತಿ. ಮಹಮ್ಮದ್ ಸಲ್ಮಾನ್ (21) ತೀವ್ರ ಗಾಯಗೊಂಡಿದ್ದು. ಜಿಲ್ಲಾಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈತನ ಪರಿಸ್ಥಿತಿ ಗಂಭೀರವಾಗಿದೆ.

ಮೈಸೂರಿನ ಕ್ಲೈಮೇಟ್ ಮಾಸ್ಟರ್ ಎಂಟರ್ ಪ್ರೈಸಸ್ ನ ಕಂಪನಿಯಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಹಮದ್ ಸಾಧಿಕ್ ಹಾಗೂ ಮಹಮ್ಮದ್ ಸಲ್ಮಾನ್ ಅವರುಗಳು ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಉತ್ಪಾದನಾ ಘಟಕದ ಏರ್ ಕೂಲರ್ ದುರಸ್ತಿಗಾಗಿ ಶುಕ್ರವಾರ ಸಂಜೆ ಬಂದಿದ್ದರು.

ರಾತ್ರಿ 7 ಗಂಟೆ ಸಮಯದಲ್ಲಿ ದುರಸ್ತಿ ಮಾಡುವಾಗ ವಿದ್ಯುತ್ ಏರಿಳಿತದಿಂದ ಟ್ಯಾಂಕ್ ನಿಂದ ಅನಿಲ ಸೋರಿಕೆಯಾಗಿದ ಪರಿಣಾಮ ಸಿಲೆಂಡರ್ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸುಟ್ಟು ಗಾಯವಾಗಿದ್ದ ಮಹಮದ್ ಸಾಧಿಕ್ ಹಾಗೂ ಮಹಮದ್ ಸಲ್ಮಾನ್ ಅವರುಗಳನ್ನು ಕಾರ್ಖಾನೆ ಸಿಬ್ಬಂದಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಹಮದ್ ಸಾಧಿಕ್ ಮಾರ್ಗ ಮಧ್ಯ ಕೊನೆ ಉಸಿರೆಳದಿದ್ದಾನೆ.


ಗಾಯಾಳು ಮಹಮದ್ ಸಲ್ಮಾನ್‌ಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನ ಸ್ಥಿತಿ ಚಿಂತಾ ಜನಕವಾಗಿದೆ. ಘಟನೆ ಸಂಬಂಧ ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ ಸೇರಿದಂತೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್, ಮದ್ದೂರು ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ನಾರಾಯಣಿ, ಕೊಪ್ಪ ಠಾಣೆ ಪಿಎಸ್ಐ ಭೀಮಪ್ಪ ಬಾಣಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರ್ಖಾನೆ ಮಾಲೀಕ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲುಮದ್ದೂರು:ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕೂಲರ್ ಟ್ಯಾಂಕ್ ಸ್ಫೋಟದಿಂದ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆ ಮಾಲೀಕರು ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕಾರ್ಖಾನೆ ಮಾಲೀಕರು ಇಂಚಾರ್ಜ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಸೇಫ್ಟಿ ಮ್ಯಾನೇಜರ್ ವಿರುದ್ಧ ಸುರಕ್ಷತಾ ಕ್ರಮ ಹಾಗೂ ನಿರ್ಲಕ್ಷತನದ ಆರೋಪದ ಮೇಲೆ ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸಿಲೆಂಡರ್ ಟ್ಯಾಂಕ್ ಸ್ಫೋಟದಿಂದ ಮೃತಪಟ್ಟಿರುವ ಮಹಮ್ಮದ್ ಸಾಧಿಕ್ ಎಂಬುವುನ ಮರಣೋತ್ತರ ಪರೀಕ್ಷೆಯನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿದ ನಂತರ ಶುಕ್ರವಾರ ಮಧ್ಯಾಹ್ನ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.