ಒಮ್ಮೆ ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಎಲ್.ಮಹೇಶ್ ಎಂಬಾತನ ಹತ್ಯೆ ಪ್ರಕರಣ ಸಂಬಂಧ ಪಾಂಡವಪುರ ಬೆಂಗಳೂರಿನ ಜಿಗಣಿ ಬಳಿ ಆರೋಪಿಗಳು ಇರುವುದಾಗಿ ತಿಳಿದುಬಂತು. ತಕ್ಷಣ ಅಲ್ಲಿಗೆ ತೆರಳಿದ ನಮ್ಮ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಒಮ್ಮೆ ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಎಲ್.ಮಹೇಶ್ ಎಂಬಾತನ ಹತ್ಯೆ ಪ್ರಕರಣ ಸಂಬಂಧ ಪಾಂಡವಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ಪಾಂಡವಪುರ ತಾಲೂಕು ಲಕ್ಷ್ಮೀಸಾಗರದ ಎಲ್.ಮಹೇಶ್‌ನನ್ನು ಹತ್ಯೆ ಮಾಡಿದ ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ಭೀಮ ಅಲಿಯಾಸ್ ಚಂದ್ರಶೇಖರ, ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಎಸ್.ಬಸವರಾಜು, ಹೇಮಂತ್‌ಕುಮಾರ್, ಪಾಂಡವಪುರ ತಾಲೂಕು ಬೇವಿನಕುಪ್ಪೆ ಗ್ರಾಮದ ಬಿ.ಆರ್.ಶಶಾಂಕ್, ಮಂಡ್ಯ ತಾಲೂಕು ಮಲ್ಲಯ್ಯನದೊಡ್ಡಿ ಗ್ರಾಮದ ಎಂ.ಆರ್.ಸುಮಂತ್‌ರನ್ನು ಬಂಧಿಸಲಾಗಿದೆ.
ಆರೋಪಿ ಭೀಮ ಮತ್ತು ಕೊಲೆಯಾದ ಮಹೇಶನ ನಡುವೆ ಘರ್ಷಣೆ ನಡೆದಿತ್ತು. ಲಕ್ಷ್ಮೀಸಾಗರದ ಅಭಿ ಎಂಬಾತನ ಕೊಲೆ ಪ್ರಕರಣದಲ್ಲಿ ಭೀಮ ಮತ್ತು ಇತರರು ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಮಾಡುವುದಾಗಿ ಮಹೇಶ ಆಗಾಗ್ಗೆ ಬೆದರಿಕೆ ಹಾಕಿದ್ದ. ಜೊತೆಗೆ ಇಬ್ಬರ ನಡುವೆಯೂ ಹಲವು ಬಾರಿ ಘರ್ಷಣೆಯೂ ನಡೆದಿತ್ತು. ಇದರಿಂದ ಬೇಸತ್ತ ಭೀಮ ಮಹೇಶನ ಕೊಲೆಗೆ ಸಂಚು ರೂಪಿಸಿದ್ದನು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಳೆದ ನ.೨೯ರಂದು ಮೇಲುಕೋಟೆ ರಸ್ತೆಯಲ್ಲಿರುವ ಬಾರೊಂದರಲ್ಲಿ ಮಹೇಶ, ಆತನ ಸ್ನೇಹಿತರಾದ ಮರೀಗೌಡ ಮತ್ತು ಕಿರಣ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಕೇಶವ ಮತ್ತು ಸಿದ್ದರಾಜು ಎಂಬುವರ ಜೊತೆ ಮಹೇಶ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ್ದ ಭೀಮ ಮತ್ತು ತಂಡದವರು ಆತನ ಹತ್ಯೆಗೆ ಕಾದು ಕುಳಿತಿದ್ದರು.
ಕುಡಿದ ಮತ್ತಿನಲ್ಲಿ ಮೂವರು ಸ್ಕೂಟರ್‌ನಲ್ಲಿ ಲಕ್ಷ್ಮೀಸಾಗರಕ್ಕೆ ತೆರಳುತ್ತಿದ್ದ ವೇಳೆ ಅಮೃತಿ ಗ್ರಾಮದ ಬಳಿ ಮೂವರು ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದಾಗ ಏಕಾಏಕಿ ಆಗಮಿಸಿದ ಭೀಮಾ ಮತ್ತು ತಂಡ ಸ್ಕೂಟರ್‌ಗೆ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಮೂವರು ಎದ್ದು ಓಡಲು ಯತ್ನಿಸಿದ್ದಾರೆ. ಈ ವೇಳೆ ಮಹೇಶನ ಮೇಲೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಬಳಿಕ ಆತನ್ನು ಪಾಂಡವಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ಕರೆತರುತ್ತಿದ್ದ ವೇಳೆ ಮಾರ್ಗ ಮಧ್ಯೆ ಮಹೇಶ ಸಾವನ್ನಪ್ಪಿದ್ದ. ಘಟನೆ ನಂತರ ಭೀಮ ಕೊಲೆ ಮಾಡಿರುವುದಾಗಿ ಹೇಳಿ ಸ್ವತಃ ನ್ಯಾಯಾಲಯಕ್ಕೆ ಶರಣಾಗಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಐದು ಮಂದಿ ಸೇರಿ ಕೊಲೆ ಮಾಡಿರುವುದಾಗಿ ತಿಳಿಸಿದ್ದನು. ಉಳಿದ ಆರೋಪಿಗಳು ಪರಾರಿಯಾಗಿದ್ದರು. ಅವರ ಪತ್ತೆಗೆ ತಂಡವನ್ನು ರಚಿಸಲಾಗಿತ್ತು. ಮಂಗಳವಾರ ರಾತ್ರಿ ಬೆಂಗಳೂರಿನ ಜಿಗಣಿ ಬಳಿ ಆರೋಪಿಗಳು ಇರುವುದಾಗಿ ತಿಳಿದುಬಂತು. ತಕ್ಷಣ ಅಲ್ಲಿಗೆ ತೆರಳಿದ ನಮ್ಮ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದರು ಎಂದು ವಿವರಿಸಿದರು.
ಎಎಸ್‌ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಡಿವೈಎಸ್ಪಿ ಶಾಂತಮುಲ್ಲಪ್ಪ ಅವರ ಮೇಲುಸ್ತುವಾರಿಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶರತ್‌ಕುಮಾರ್ ಮತ್ತು ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.ಎಎಸ್‌ಪಿಗಳಾದ ತಿಮ್ಮಯ್ಯ, ಎಸ್.ಸಿ.ಗಂಗಾಧರಸ್ವಾಮಿ, ಡಿವೈಎಸ್ಪಿ ಶಾಂತಮಲ್ಲಪ್ಪ, ಸಬ್ ಇನ್ಸ್‌ಪೆಕ್ಟರ್ ಎಚ್.ಪಿ.ಶರತ್‌ಕುಮಾರ್ ಗೋಷ್ಠಿಯಲ್ಲಿದ್ದರು. ರೌಡಿ ಶೀಟರ್‌ಗಳ ಗಡಿಪಾರಿಗೆ ಕ್ರಮ
ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲು ಕ್ರಮ ವಹಿಸಲಾಗಿದೆ. ಕೊಲೆಯಾದ ಮಹೇಶನನ್ನು ಬೆಳಗಾವಿಗೆ ಗಡಿಪಾರು ಮಾಡಲಾಗಿತ್ತು. ಅವಧಿ ಮುಗಿದ ನಂತರ ಆತ ವಾಪಸ್ಸು ಬಂದಿದ್ದನು. ಮತ್ತೆ ಕೆಲವೊಂದು ಘರ್ಷಣೆ ಪ್ರಕರಣಗಳಲ್ಲಿ ಮಹೇಶ ಭಾಗಿಯಾಗಿದ್ದರಿಂದ ಆತನನ್ನು ಗಡಿಪಾರು ಮಾಡಲು ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ ಆತ ಕೊಲೆಯಾಗಿದ್ದಾನೆ ಎಂದು ತಿಳಿಸಿದರು.ಚಿನ್ನದ ಸರ ಕದಿಯುತ್ತಿದ್ದ ಯುವಕನ ಸೆರೆ
ಕನ್ನಡಪ್ರಭ ವಾರ್ತೆ ಮಂಡ್ಯಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ೧೯ ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಿ ಆತನಿಂದ ೫.೬೦ ಲಕ್ಷ ರು. ಮೌಲ್ಯದ ಚಿನ್ನದ ಸರ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಟೋಮೆಟಿಕ್ ಆಕ್ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮೈಸೂರಿನ ಹೂಟಗಳ್ಳಿಯ ನಿವಾಸಿ ಎಂ.ದರ್ಶನ್ (೧೯) ಎಂಬಾತನೇ ಬಂಧಿತ ಆರೋಪಿ. ಈತ ಪಾಂಡವಪುರ ತಾಲೂಕು ಕಡಬ ಗ್ರಾಮದ ಜಯಮ್ಮ ಅವರ ಬಳಿಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದನು. ಕಳೆದ ಡಿ.೭ರಂದು ಪಾಂಡವಪುರ ತಾಲೂಕು ಕಡಬ ಗ್ರಾಮದ ಜಯಮ್ಮ ಅವರು ಮನೆ ಮುಂದೆ ಕುಳಿತಿದ್ದಾಗ ಕುಡಿಯಲು ನೀರು ಕೇಳುವ ನೆಪದಲ್ಲಿ ಸ್ಕೂಟರ್‌ನಲ್ಲಿ ಬಂದು ನೀರು ಕುಡಿದು ಅವರ ಕತ್ತಿನಲ್ಲಿದ್ದ ಸುಮಾರು ೭ ಗ್ರಾಂ ತೂಕದ ಚಿನ್ನದ ಗುಂಡು, ೩ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಇರುವ ಕರಿಮಣಿ ಮಾಂಗಲ್ಯ ಸರವನ್ನು ಕಿತ್ತುಕೊಡು ಪರಾರಿಯಾಗಿದ್ದನು.
ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಈತನ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪ್ರತಿ ಠಾಣೆಯಿಂದ ಐದು ಮಂದಿಯ ತಂಡವನ್ನು ರಚಿಸಿ ಆ ತಂಡ ಎಲ್ಲ ಪ್ರಕರಣಗಳನ್ನು ಬೇಧಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.