ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿರುವ ಆರೋಪ ಕೇಳಿ ಬಂದಿದೆ. ನಟಿ ಆರ್.ಚೈತ್ರಾ ಅಪಹರಣಕ್ಕೊಳಗಾದವರು. ತಮ್ಮ ಒಂದು ವರ್ಷದ ಮಗುವನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದ ನಟಿಯ ಪತಿಯಾಗಿರುವ ಚಿತ್ರ ನಿರ್ಮಾಪಕ ಹರ್ಷವರ್ಧನ್ ಈ ಕೃತ್ಯ ಎಸಗಿದ್ದಾರೆ
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿರುವ ಆರೋಪ ಕೇಳಿ ಬಂದಿದೆ.
ನಟಿ ಆರ್.ಚೈತ್ರಾ ಅಪಹರಣಕ್ಕೊಳಗಾದವರು. ತಮ್ಮ ಒಂದು ವರ್ಷದ ಮಗುವನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದ ನಟಿಯ ಪತಿಯಾಗಿರುವ ಚಿತ್ರ ನಿರ್ಮಾಪಕ ಹರ್ಷವರ್ಧನ್ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ನಟಿಯ ಸಹೋದರಿ ಲೀಲಾ ಅವರು, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಹರ್ಷವರ್ಧನ್ ಮತ್ತು ಕೌಶಿಕ್ ಸೇರಿ ಇತರರ ವಿರುದ್ಧ ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಹರ್ಷವರ್ಧನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆರೋಪಿಯ ವಿರುದ್ಧ ಶಿರಸಿಯ ಸಿದ್ದಾಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದ ಸಂಬಂಧ ಸಿದ್ದಾಪುರ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಅಪಹರಣ ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೈತ್ರಾ ಅವರು ಸಿರಿಯಲ್ ಕಲಾವಿದೆ ಆಗಿದ್ದಾರೆ. ಚೈತ್ರಾ ಮತ್ತು ಹರ್ಷವರ್ಧನ್ 2023ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಸುಖವಾಗಿದ್ದ ಸಂಸಾರದಲ್ಲಿ ನಂತರದ ದಿನಗಳಲ್ಲಿ ಮನಸ್ತಾಪಗಳು ಉಂಟಾಗಿದ್ದವು. ಕಳೆದ ಏಳೆಂಟು ತಿಂಗಳಿಂದ ಪತಿ-ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪತಿ ಹರ್ಷವರ್ಧನ್ ಹಾಸನದಲ್ಲಿ ವಾಸವಿದ್ದರೆ, ನಟಿ ಚೈತ್ರಾ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಜೀವನ ನಿರ್ವಹಣೆಗಾಗಿ ಚೈತ್ರಾ ಮತ್ತೆ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೂಟಿಂಗ್ ನೆಪದಲ್ಲಿ ಅಪಹರಣ
ಆರೋಪಿ ಹರ್ಷವರ್ಧನ್ ವರ್ಧನ್ ಎಂಟರ್‌ಪ್ರೈಸಸ್ ಮಾಲೀಕನಾಗಿದ್ದು, ಚಿತ್ರ ನಿರ್ಮಾಪಕನಾಗಿದ್ದಾನೆ. ಪತ್ನಿಯನ್ನು ಅಪಹರಿಸಲು ಆತ ಚಿತ್ರೀಕರಣವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಚೈತ್ರಾ ಅವರನ್ನು ನಂಬಿಸಿ 20 ಸಾವಿರ ರು. ಮುಂಗಡ ಹಣ ನೀಡಿ ಮನೆಯಿಂದ ಹೊರಬರುವಂತೆ ಮಾಡಲಾಗಿತ್ತು. ಇದು ಪತಿ ಹರ್ಷವರ್ಧನ್ ರೂಪಿಸಿದ್ದ ಸಂಚು ಎಂಬುದು ಆಕೆಗೆ ತಡವಾಗಿ ಗೊತ್ತಾಗಿದೆ. ಹರ್ಷವರ್ಧನ್ ತನ್ನ ಸಹಚರನಾದ ಕೌಶಿಕ್ ಎಂಬಾತನನ್ನು ಕೃತ್ಯಕ್ಕೆ ಬಳಸಿಕೊಂಡಿದ್ದ. ಕೌಶಿಕ್ ಮತ್ತು ಆತನ ತಂಡದವರು ಶೂಟಿಂಗ್ ಇದೆ ಎಂದು ಹೇಳಿ ಚೈತ್ರಾ ಅವರನ್ನು ಡಿ.7ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಕರೆಸಿಕೊಂಡಿದ್ದರು. ಅಲ್ಲಿಂದ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ನೈಸ್ ರಸ್ತೆ ಹಾಗೂ ಬಿಡದಿ ಮಾರ್ಗವಾಗಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಮಗಳ ಬಿಡುವೆ ನನ್ನ ಮಗು ಕಳುಹಿಸಿ ಎಂದು ಕರೆ
ಅಪಹರಣಕಾರರ ಕಣ್ತಪ್ಪಿಸಿ ಚೈತ್ರಾ ಅವರು ತಮ್ಮ ಸ್ನೇಹಿತ ಗಿರೀಶ್ ಎಂಬುವರಿಗೆ ಕರೆ ಮಾಡಿ ತಾನು ಸಂಕಷ್ಟದಲ್ಲಿರುವುದನ್ನು ತಿಳಿಸಿದ್ದಾರೆ. ಗಿರೀಶ್ ತಕ್ಷಣವೇ ಚೈತ್ರಾ ಅವರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಅದೇ ದಿನ ಸಂಜೆ ವೇಳೆಗೆ ಆರೋಪಿ ಪತಿ ಹರ್ಷವರ್ಧನ್, ಚೈತ್ರಾ ಅವರ ತಾಯಿಗೆ ಕರೆ ಮಾಡಿ, ನಿಮ್ಮ ಮಗಳನ್ನು ನಾನೇ ಅಪಹರಿಸಿದ್ದೇನೆ.
ಆಕೆಯನ್ನು ಬಿಡಬೇಕಾದರೆ ನನ್ನ ಮಗುವನ್ನು ನನ್ನ ಬಳಿಗೆ ಕಳುಹಿಸಬೇಕು. ಮಗು ಸಿಕ್ಕರೆ ಮಾತ್ರ ಚೈತ್ರಾಳನ್ನು ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಚೈತ್ರಾ ಅವರ ಮತ್ತೊಬ್ಬ ಸಂಬಂಧಿಕರಿಗೆ ಕರೆ ಮಾಡಿ, ಮಗುವನ್ನು ಅರಸೀಕೆರೆಗೆ ಕರೆತರುವಂತೆ ಮತ್ತು ಅಲ್ಲಿ ಚೈತ್ರಾಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾನೆ.
ಆರಂಭದಲ್ಲಿ ವಿಷಯ ತಿಳಿದು ಕಂಗಾಲಾದ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಸನದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗುವಿನ ಮೇಲಿನ ಹಕ್ಕಿಗಾಗಿ ಪತಿಯೇ ಈ ರೀತಿ ಕಾನೂನುಬಾಹಿರ ಕೃತ್ಯಕ್ಕೆ ಇಳಿದಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
