ವಧು ತೋರಿಸುವುದಾಗಿ ರ್ಯಾಪಿಡೋ ಸವಾರಗೆ ಹನಿಟ್ರ್ಯಾಪ್‌ : 6 ಮಂದಿಯ ಗ್ಯಾಂಗ್‌ ಬಂಧನ

| N/A | Published : Feb 02 2025, 01:01 AM IST / Updated: Feb 02 2025, 04:26 AM IST

ಸಾರಾಂಶ

ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ರ್ಯಾಪಿಡೋ ಸವಾರನಿಂದ ಹಣ ಸುಲಿಗೆ ಮಾಡಿದ್ದ ಇಬ್ಬರು ಆಟೋ ಚಾಲಕರು ಸೇರಿದಂತೆ ಆರು ಮಂದಿಯನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಗಳಿಂದ ಹಣ ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ರ್ಯಾಪಿಡೋ ಸವಾರನಿಂದ ಹಣ ಸುಲಿಗೆ ಮಾಡಿದ್ದ ಇಬ್ಬರು ಆಟೋ ಚಾಲಕರು ಸೇರಿದಂತೆ ಆರು ಮಂದಿಯನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಗಳಿಂದ ಹಣ ಜಪ್ತಿ ಮಾಡಿದ್ದಾರೆ.

ಭದ್ರಪ್ಪ ಲೇಔಟ್‌ನ ಮಂಜುಳಾ ಅಲಿಯಾಸ್ ಮಂಜು, ತಾವರೆಕೆರೆಯ ಮಂಗನಹಳ್ಳಿ ನಿವಾಸಿ ಶಿಲ್ಪಾ ಅಲಿಯಾಸ್ ಗೀತಾ, ಎಂ.ಎಸ್‌.ಪಾಳ್ಯದ ಲೀಲಾವತಿ, ಹೆಬ್ಬಾಳದ ವಿಜಯಮ್ಮ, ಎಚ್‌.ವೆಂಕಟೇಶ್‌ ಅಲಿಯಾಸ್‌ ಪಿಂಟು ಹಾಗೂ ವಿದ್ಯಾರಣ್ಯಪುರದ ಎಂ.ಹರೀಶ್ ಬಂಧಿತರು. ಕೆಲ ದಿನಗಳ ಹಿಂದೆ ರ್ಯಾಪಿಡ್ ಬೈಕ್ ಸವಾರನಿಗೆ ₹51 ಸಾವಿರ ಸುಲಿಗೆ ಬಗ್ಗೆ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಾಯಿತು. ಅದರನ್ವಯ ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಸುಲಿಗೆ ಗ್ಯಾಂಗ್ ಅನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಹೆಸರಲ್ಲಿ ಬೆದರಿಕೆ:  ಕೆಲ ದಿನಗಳ ಹಿಂದೆ ರ್ಯಾಪಿಡೋ ಸವಾರನಿಗೆ ಹೆಬ್ಬಾಳದ ಭದ್ರಪ್ಪ ಲೇಔಟ್‌ನ ಮಂಜುಳಾ ಪರಿಚಯವಾಗಿದ್ದಳು. ಆಗ ತಾನು ಅವಿವಾಹಿತನಾಗಿದ್ದು, ಮದುವೆಗೆ ವಧು ಹುಡುಕುತ್ತಿರುವುದಾಗಿ ಆಕೆ ಬಳಿ ಸಂತ್ರಸ್ತ ಹೇಳಿಕೊಂಡಿದ್ದ. ಈ ವಿಚಾರ ತಿಳಿದ ಮಂಜುಳಾ, ನನಗೆ ಪರಿಚಿತರ ಮಗಳಿದ್ದಾಳೆ. ಆ ಹುಡುಗಿ ನೋಡು ಇಷ್ಟವಾದರೆ ಮದುವೆ ಮಾಡಿಸುವೆ ಎಂದಿದ್ದಳು. ಈ ಮಾತು ನಂಬಿದ ಆತ, ಮಂಜುಳಾ ಹೇಳಿದ ಮನೆಗೆ ಹೋಗಿದ್ದ. ಕೆಲ ಹೊತ್ತಿಗೆ ಆ ಮನೆಗೆ ದಿಢೀರ್ ನುಗ್ಗಿದ ಆಟೋ ಚಾಲಕರಾದ ವೆಂಕಟೇಶ್ ಹಾಗೂ ಹರೀಶ್, ರ್ಯಾಪಿಡೋ ಸವಾರನಿಗೆ ನೀನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ. ಕೊನೆಗೆ ಆರೋಪಿಗಳು ಆತನಿಂದ ₹51 ಸಾವಿರ ಹಣ ಸುಲಿಗೆ ಮಾಡಿ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಹಲವು ಜನರಿಗೆ ಸುಲಿಗೆ?

ಆರೋಪಿಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ದಾರಿ ತುಳಿದಿದ್ದು, ಬಹಳ ದಿನಗಳಿಂದ ಜನರಿಗೆ ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು ಹೆಬ್ಬಾಳದ ಮಂಜುಳಾ ಗ್ಯಾಂಗ್‌ ಸುಲಿಗೆ ಮಾಡಿರುವ ಬಗ್ಗೆ ಅನುಮಾನವಿದೆ. ಇದೇ ಮೊದಲ ಬಾರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದು, ರ್ಯಾಪಿಡೋ ಸವಾರ ಹೊರತುಪಡಿಸಿ ಬೇರೆ ಯಾರೂ ದೂರು ನೀಡಿಲ್ಲ. ಹಣ ಕಳೆದುಕೊಂಡವರು ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.