ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ : ಮಹಿಳೆಗೆ ₹ 39 ಲಕ್ಷ ವಂಚಿಸಿದ ಐಸ್‌ ಕ್ರೀಂ ವ್ಯಾಪಾರಿ ಸೆರೆ

| N/A | Published : Feb 02 2025, 01:00 AM IST / Updated: Feb 02 2025, 04:32 AM IST

cyber crime
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ : ಮಹಿಳೆಗೆ ₹ 39 ಲಕ್ಷ ವಂಚಿಸಿದ ಐಸ್‌ ಕ್ರೀಂ ವ್ಯಾಪಾರಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಗೃಹಿಣಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 39 ಲಕ್ಷ ರು. ಸುಲಿಗೆ ಮಾಡಿದ್ದ ಸೈಬರ್ ವಂಚಕ ಜಾಲದ ಸದಸ್ಯ ಐಸ್‌ ಕ್ರೀಂ ವ್ಯಾಪಾರಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1.07 ಲಕ್ಷ ರು ಜಪ್ತಿ ಮಾಡಲಾಗಿದೆ.

  ಬೆಂಗಳೂರು : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಗೃಹಿಣಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 39 ಲಕ್ಷ ರು. ಸುಲಿಗೆ ಮಾಡಿದ್ದ ಸೈಬರ್ ವಂಚಕ ಜಾಲದ ಸದಸ್ಯ ಐಸ್‌ ಕ್ರೀಂ ವ್ಯಾಪಾರಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1.07 ಲಕ್ಷ ರು ಜಪ್ತಿ ಮಾಡಲಾಗಿದೆ.

ಪರಪ್ಪನ ಅಗ್ರಹಾರದ ಕವಿ ಅರಸು ಬಂಧಿತ. ಈ ಜಾಲದ ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಬೇಗೂರಿನ ರಾಘವೇಂದ್ರ ಲೇಔಟ್‌ನ ನಿವಾಸಿ ವೀಣಾ ಎಂಬುವರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಪಿ.ಎಸ್‌.ಕೃಷ್ಣಕುಮಾರ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ವಂಚಕರ ಜಾಲದ ಸದಸ್ಯನನ್ನು ಬಂಧಿಸಿದೆ.

ಕಳೆದ ಡಿ.5ರಂದು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತನ್ನನ್ನು ಟ್ರಾಯ್‌ ಅಧಿಕಾರಿ ಎಂದು ಪರಿಚಯಿಸಿಕೊಂಡು ಸಿಬಿಐನಲ್ಲಿ ನಿಮ್ಮ ನಂಬರ್ ವಿರುದ್ಧ ದೂರು ದಾಖಲಾಗಿದ್ದು, ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡಲಾಗಿದೆ ಎಂದಿದ್ದ. ಈ ಮಾತಿಗೆ ಭೀತಿಗೊಂಡ ದೂರುದಾರರು, ‘ಯಾವ ಪ್ರಕರಣ’ ಎಂದು ಪ್ರಶ್ನಿಸಿದ್ದಾರೆ. ಆಗನೀವು ನೀರವ್ ಅಗರ್‌ವಾಲ್ ಎಂಬ ವ್ಯಕ್ತಿಯ ಜತೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಆದರಿಂದ ಈ ಕೂಡಲೇ ದೆಹಲಿಗೆ ಬರಬೇಕಾಗುತ್ತದೆ. ಇಲ್ಲವಾದರೆ ಆನ್‌ಲೈನ್ ಮೂಲಕ ವಿಚಾರಣೆ ನಡೆಸುವುದಾಗಿ ಹೇಳಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಾನೆ. ಆಗ ಖಾಕಿ ಸಮವಸ್ತ್ರದಲ್ಲಿದ್ದ ಅಪರಿಚಿತನನ್ನು ಕಂಡು ವೀಣಾ ಭಯಗೊಂಡಿದ್ದಾರೆ.

‘ವಿಡಿಯೋ ಕಾಲ್‌ನಲ್ಲಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದು, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ನಿಮ್ಮನ್ನು ಬಂಧಿಸುತ್ತೇವೆ.ಈ ಪ್ರಕರಣದಿಂದ ನೀವು ಹೊರ ಬರಬೇಕಾದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾನು ಸೂಚಿಸುವ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಇಲ್ಲದೆ ಹೋದರೆ ನಿಮ್ಮ ಪತಿ ಹಾಗೂ ಮಕ್ಕಳನ್ನು ಸಹ ಬಂಧಿಸಲಾಗುವುದು’ ಎಂದು ಸೈಬರ್ ವಂಚಕ ತಾಕೀತು ಮಾಡಿದ್ದ. ಈ ಮಾತಿಗೆ ಹೆದರಿದ ವೀಣಾ ಅವರು, ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 39 ಲಕ್ಷ ರು ಹಣ ವರ್ಗಾಯಿಸಿದ್ದರು. ಕೊನೆಗೆ ತಾವು ವಂಚನೆಗೊಳಾಗದ ಸಂಗತಿ ವೀಣಾ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಬೇಗೂರು ಠಾಣೆಗೆ ದೂರು ದಾಖಲಾಯಿತು.

ಹಣ ವರ್ಗಾವಣೆಗೆ ಸಹಕಾರ

ವೀಣಾ ಅವರಿಂದ ದೋಚಿದ್ದ ಹಣವನ್ನು ಬಿಟ್‌ ಕಾಯಿನ್ ಪರಿವರ್ತಿಸಿ ಸೈಬರ್ ವಂಚಕರು ಪಡೆದಿದ್ದರು. ಈ ಹಣ ವರ್ಗಾವಣೆ ಕುರಿತು ಪರಿಶೀಲಿಸಿದಾಗ ಬೆಂಗಳೂರಿನ ವ್ಯಕ್ತಿಯೊಬ್ಬನ ಖಾತೆಗೆ 6.52 ಲಕ್ಷ ರು ಹಣ ಜಮೆಯಾಗಿರುವುದು ಗೊತ್ತಾಯಿತು. ಈ ಮಾಹಿತಿ ಮೇರೆಗೆ ಕೂಡಲೇ ಕಾರ್ಯಾಚರಣೆ ನಡೆಸಿ ಕವಿಅರಸುನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟ. ಕಮಿಷನ್ ಆಸೆಗೆ ಸೈಬರ್ ವಂಚನೆ ಕೃತ್ಯದ ಹಣ ವರ್ಗಾವಣೆಗೆ ಆತ ನೆರವಾಗಿದ್ದ. ಮುಂಬೈನಲ್ಲಿದ್ದ ಮಾಸ್ಟರ್‌ ಮೈಂಡ್ ನಿರ್ದೇಶನದಂತೆ ನಕಲಿ ಬ್ಯಾಂಕ್ ಖಾತೆಗಳನ್ನು ತರೆದು ಹಣವನ್ನು ಆತ ವರ್ಗಾಯಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಲವು ವರ್ಷಗಳಿಂದ ಪರಪ್ಪನ ಅಗ್ರಹಾರ ಸಮೀಪ ನೆಲೆಸಿದ್ದ ತಮಿಳುನಾಡು ಮೂಲದ ಕವಿ ಅರಸು, ಸ್ಥಳೀಯವಾಗಿ ಐಸ್ ಕ್ರಿಮ್ ಅಂಗಡಿ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.