ಸಾರಾಂಶ
ಬೆಂಗಳೂರು : ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷದ ಅಪ್ರಾಪ್ತೆಯ 28 ವಾರಗಳ ಗರ್ಭವನ್ನು ವೈದ್ಯಕೀಯ ಗರ್ಭಪಾತ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ಹೈಕೋರ್ಟ್ ಅನುಮತಿಸಿದೆ.
ವೈದ್ಯಕೀಯ ಗರ್ಭಪಾತ ಮಾಡಲು ವೈದ್ಯರಿಗೆ ಸೂಚನೆ ನೀಡುವಂತೆ ಕೋರಿ ಸಂತ್ರಸ್ತ ಬಾಲಕಿಯ ಪರವಾಗಿ ಯಲಹಂಕ ನಿವಾಸಿ ಸಂತ್ರಸ್ತೆಯ ತಾಯಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರ ಪೀಠ ಈ ಆದೇಶ ನೀಡಿದೆ. ಸಂತ್ರಸ್ತೆಯ ಜೀವಕ್ಕೆ ಹಾನಿಯಾಗದಂತೆ ಗರ್ಭಪಾತ ಮಾಡಲು ವೈದ್ಯರಿಂದ ಅಗತ್ಯ ಪರೀಕ್ಷೆಗಳ ಬಳಿಕ ನಿರ್ಧರಿಸಿ ಕ್ರಮಕ್ಕೆ ಮುಂದಾಗಬೇಕು. ಗರ್ಭಪಾತ ಮಾಡಿದ ನಂತರ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಅನುಕೂಲವಾಗುವಂತೆ ಸಂರಕ್ಷಿಸಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯರಿಗೆ ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, ಗರ್ಭಪಾತ ಪ್ರಕ್ರಿಯೆಗೆ ಅರ್ಜಿದಾರರು ಅಥವಾ ಕುಟುಂಬದವರಿಂದ ಯಾವುದೇ ವೆಚ್ಚ ಪಡೆದುಕೊಳ್ಳಬಾರದು. ಸಂತ್ರಸ್ತೆಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಕ್ಕೆ ಯಲಹಂಕ ಪೊಲೀಸರು ವಾಹನ ವ್ಯವಸ್ಥೆ ಮಾಡಬೇಕು. ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶವನ್ನು ಪಾಲಿಸಿದ ಬಗ್ಗೆ ಎರಡು ವಾರಗಳಲ್ಲಿ ವರದಿ ನೀಡುವಂತೆ ಯಲಹಂಕ ಪೊಲೀಸರು ಹಾಗೂ ವಾಣಿ ವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ.
ಪ್ರಕರಣವೇನು?: ಅರ್ಜಿಯದಾರೆಯ 16 ವರ್ಷದ ಮಗಳ ಮೇಲೆ ಯುವಕನೋರ್ವ ಕಳೆದ ಆರೇಳು ತಿಂಗಳಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದರಿಂದ ಅಪ್ರಾಪ್ತೆ ಗರ್ಭ ಧರಿಸಿದ್ದರು. ಹೈಕೋರ್ಟ್ ಮೊರೆ ಹೋಗಿದ್ದ ಬಾಲಕಿಯ ತಾಯಿ ಗರ್ಭಪಾತಕ್ಕೆ ಮನವಿ ಮಾಡಿದ್ದರು.