ಜೈಲ್‌ ವಿಡಿಯೋ ಸೋರಿಕೆ ಹಿಂದೆ ನಟ ದರ್ಶನ್‌ ಆಪ್ತ ಧನ್ವೀರ್‌ ಕೈವಾಡ?

| Published : Nov 11 2025, 04:15 AM IST

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಐಪಿ ಸವಲತ್ತು ಕಲ್ಪಿಸಿದ ವಿಡಿಯೋ ಬಹಿರಂಗದ ಹಿಂದೆ ಕೈವಾಡವಿರುವ ಶಂಕೆ ಮೇರೆಗೆ ಕನ್ನಡ ಚಲನಚಿತ್ರ ನಟ ಧನ್ವೀರ್ ಅವರಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಐಪಿ ಸವಲತ್ತು ಕಲ್ಪಿಸಿದ ವಿಡಿಯೋ ಬಹಿರಂಗದ ಹಿಂದೆ ಕೈವಾಡವಿರುವ ಶಂಕೆ ಮೇರೆಗೆ ಕನ್ನಡ ಚಲನಚಿತ್ರ ನಟ ಧನ್ವೀರ್ ಅವರಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.

ಈ ಅನುಮಾನ ಹಿನ್ನೆಲೆಯಲ್ಲಿ ಧನ್ವೀರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಈ ವೇಳೆ ತನಗೆ ಯಾವುದೇ ಮಾಹಿತಿ ಇಲ್ಲ. ನನಗೂ ಜೈಲ್ ವಿಡಿಯೋ ಬಹಿರಂಗಕ್ಕೂ ಸಂಬಂಧವಿಲ್ಲ ಎಂದು ಧನ್ವೀರ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್ ಆಪ್ತರಾಗಿರುವ ಧನ್ವೀರ್‌, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿತರಾದಾಗ ನಟನ ಬೆನ್ನಿಗೆ ನಿಂತರು. ಜೈಲಿನಲ್ಲಿರುವ ದರ್ಶನ್ ಅವರನ್ನು ಧನ್ವೀರ್‌ ನಿಯಮಿತವಾಗಿ ಭೇಟಿ ಮಾಡುತ್ತಿದ್ದಾರೆ. ಅಲ್ಲದೆ ದರ್ಶನ್ ಪರ ಕಾನೂನು ಹೋರಾಟದಲ್ಲಿ ಸಹ ಅವರ ಕುಟುಂಬದವರ ಜತೆ ಧನ್ವೀರ್‌ ನಿಂತಿದ್ದಾರೆ. ಈಗ ಜೈಲಿನ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಕೈದಿಗಳಿಗೆ ಅಕ್ರಮವಾಗಿ ಸವಲತ್ತು ನೀಡಿರುವ ವಿಡಿಯೋ ಬಹಿರಂಗಕ್ಕೆ ಧನ್ವೀರ್‌ ನೆರವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಾಹಿಲ್ ಪಡೆದ ವಿಡಿಯೋ?:

ಜೈಲಿನಲ್ಲಿರುವ ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ಜತೆಗೂಡಿ ವಿದೇಶದಿಂದ ಚಿನ್ನ ಕಳ್ಳಸಾಗಾಣಿಕೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ಮೊಬೈಲ್‌ನಲ್ಲಿ ಮಾತನಾಡುವ ವಿಡಿಯೋವನ್ನು ಕೊಲೆ ಯತ್ನ ಪ್ರಕರಣವೊಂದರ ಆರೋಪಿ ಸಾಹಿಲ್‌ನಿಂದ ಧನ್ವೀರ್ ಪಡೆದಿದ್ದರು ಎನ್ನಲಾಗಿದೆ. ಜಾಮೀನು ಪಡೆದು ನಾಲ್ಕು ದಿನಗಳ ಹಿಂದೆ ಜೈಲಿನಿಂದ ಸಾಹಿಲ್ ಹೊರ ಬಂದಿದ್ದ. ಈತನ ಬಳಿ ತರುಣ್ ವಿಡಿಯೋ ಇರುವ ಬಗ್ಗೆ ಮಾಹಿತಿ ಪಡೆದ ಧನ್ವೀರ್‌, ತನ್ನ ಸ್ನೇಹಿತರ ಮೂಲಕ ಸಾಹಿಲ್‌ನನ್ನು ಸಂಪರ್ಕಿಸಿ ವಿಡಿಯೋ ಪಡೆದಿದ್ದರು. ನಂತರ ತಮ್ಮ ಸಂಪರ್ಕ ಜಾಲ ಬಳಸಿಕೊಂಡು ಮಾಧ್ಯಮಗಳಿಗೆ ಗುಪ್ತವಾಗಿ ಅವರು ಬಿಡುಗಡೆಗೊಳಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನಿಸಿದ್ದಾರೆ.

ಗಡ್ಡ ತೆಗೆದ ಶಕೀಲ್:

ಇನ್ನು 2023ರ ಜೂನ್‌ನಲ್ಲಿ ಶಂಕಿತ ಉಗ್ರ ಶಕೀಲ್‌ನ ವಿಡಿಯೋ ಚಿತ್ರೀಕರಿಸಿರುವುದು ಕಾರಾಗೃಹದ ಆಂತರಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ತಾನು ಮೊಬೈಲ್ ಬಳಸುತ್ತಿಲ್ಲ. ಎರಡೂವರೆ ವರ್ಷಗಳ ಹಿಂದಿನ ಹಳೆಯ ವಿಡಿಯೋ ಅದಾಗಿದೆ. ಅಂದು ಸಹ ಕೈದಿಯೊಬ್ಬ ಕೊಟ್ಟಿದ್ದ ಮೊಬೈಲ್ ಬಳಸಿದೆ ಎಂದು ಶಕೀಲ್ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ ಹಳೆಯ ವಿಡಿಯೋದಲ್ಲಿ ಶಕೀಲ್ ಗಡ್ಡ ಬಿಟ್ಟಿದ್ದರೆ, ಈಗ ಗಡ್ಡ ಬೋಳಿಸಿ ಹೊಸ ಅವತಾರದಲ್ಲಿ ಆತ ಕಾಣಿಸಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.

ಧನ್ವೀರ್ ಮೊಬೈಲಲ್ಲಿ ಜೈಲ್‌ ವಿಡಿಯೋ ಇಲ್ಲ;

ವಿಡಿಯೋ ಬಹಿರಂಗ ಶಂಕೆ ಹಿನ್ನೆಲೆಯಲ್ಲಿ ಧನ್ವೀರ್ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲಿಸಿದ್ದರು. ಆದರೆ ಮೊಬೈಲ್‌ನಲ್ಲಿ ವಿಡಿಯೋ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.