ಸಾರಾಂಶ
ನವದೆಹಲಿ : ಜೈಲುಪಾಲಾಗುವ ಪ್ರಧಾನಿ, ಸಿಎಂ, ಸಚಿವರ ವಜಾ ಮಸೂದೆಯನ್ನು ಪ್ರಶ್ನಿಸಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಈ ಸಂಬಂಧ ತಮ್ಮ ಜೈಲಾಡಳಿತ ಪ್ರಸ್ನಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ತಮ್ಮ 160 ದಿನಗಳ ಜೈಲಾಡಳಿತ ಸಮರ್ಥಿಸಿದ್ದಾರೆ.
ಟ್ವೀಟ್ ಮಾಡಿರುವ ಕೇಜ್ರಿವಾಲ್, ‘ಕೇಂದ್ರ ಸರ್ಕಾರ ರಾಜಕೀಯ ಪಿತೂರಿ ಮಾಡಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳಿಸಿತು. ನಾನು 160 ದಿನಗಳ ಕಾಲ ಜೈಲಿಂದ ಸರ್ಕಾರ ನಡೆಸಿದೆ. ಆಗ ನಗರದಲ್ಲಿ ವಿದ್ಯುತ್ ಕಡಿತವಿರಲಿಲ್ಲ, ನೀರು ಲಭ್ಯವಿತ್ತು, ಆಸ್ಪತ್ರೆ ಮತ್ತು ಮೊಹಲ್ಲಾ ಕ್ಲಿನಿನ್‌ಕಲ್ಲಿ ಉಚಿತ ಔಷಧ ಲಬ್ಯವಿತ್ತು. ಒಂದೇ ಒಂದು ಮಳೆ ಹಾನಿ ಕೂಡ ಆಗಿರಲಿಲ್ಲ ಮತ್ತು ಖಾಸಗಿ ಶಾಲೆಗಳ ನಿರಂಕುಶ ವರ್ತನೆಗೆ ಅವಕಾಶವಿರಲಿಲ್ಲ’ ಎಂದಿದ್ದಾರೆ,ಆದರೆ, ‘ಕಳೆದ 7 ತಿಂಗಳಲ್ಲಿ ದೆಹಲಿಯ ಬಿಜೆಪಿ ಸರ್ಕಾರ ನಗರವನ್ನು ನರಕ ಮಾಡಿದೆ. ದೆಹಲಿಯ ಜನರು ಈಗ ಜೈಲಿನಿಂದ ಕಾರ್ಯನಿರ್ವಹಿಸಿದ ಸರ್ಕಾರವನ್ನು ನೆನಪಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.
ಇದೇ ವೇಳೆ, ‘ಭ್ರಷ್ಟ ವ್ಯಕ್ತಿಗಳನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಂಡು ಅವರಿಗೆ ಸ್ಥಾನಗಳನ್ನು ನೀಡುವ ನಾಯಕರು ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೇ’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಭ್ರಷ್ಟರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡು ಕ್ಲೀನ್‌ಚಿಟ್ ನೀಡುತ್ತದೆ ಎಂದು ಕಿಡಿಕಾರಿದ್ದಾರೆ.