ಊಟದ ತಟ್ಟೆ ಬಿಸಾಕ್ತಾರೆ, ಶೂ ಹಾಕಲೂ ಬಿಡುತ್ತಿಲ್ಲ: ಜೈಲ್‌ ಬಗ್ಗೆ ದರ್ಶನ್ ದೂರು

| Published : Sep 03 2025, 01:01 AM IST

ಊಟದ ತಟ್ಟೆ ಬಿಸಾಕ್ತಾರೆ, ಶೂ ಹಾಕಲೂ ಬಿಡುತ್ತಿಲ್ಲ: ಜೈಲ್‌ ಬಗ್ಗೆ ದರ್ಶನ್ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ಗೆ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ದರ್ಶನ್‌ ಶೂ ಹಾಕಿಕೊಂಡಿದ್ದರೆ ಅದನ್ನು ಜೈಲಾಧಿಕಾರಿಗಳು ಬಿಚ್ಚಿಸುತ್ತಾರೆ.

- ಹಾಸಿಗೆ, ತಲೆದಿಂಬು, ಸ್ವೆಟರ್‌ ಕೂಡ ಕೊಡುತ್ತಿಲ್ಲ- ಕನಿಷ್ಠ ಸೌಲಭ್ಯ ಕೊಡಬೇಡಿ ಅಂತ ಸುಪ್ರೀಂ ಹೇಳಿಲ್ಲ

--

ಪವಿತ್ರಾಗೌಡಗೆ ಬೇಲ್‌

ನೀಡಲು ಬೆಂಗಳೂರು

ಕೋರ್ಟ್‌ ನಿರಾಕರಣೆ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ಗೆ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ದರ್ಶನ್‌ ಶೂ ಹಾಕಿಕೊಂಡಿದ್ದರೆ ಅದನ್ನು ಜೈಲಾಧಿಕಾರಿಗಳು ಬಿಚ್ಚಿಸುತ್ತಾರೆ. ಊಟದ ತಟ್ಟೆಯನ್ನು ಎಸೆದು ಹೋಗುತ್ತಾರೆ ಎಂದು ನಟನ ಪರ ವಕೀಲರು ಮಂಗಳವಾರ ನ್ಯಾಯಾಲಯದ ಮುಂದೆ ಆರೋಪಿಸಿದ್ದಾರೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ-ಹೊದಿಕೆ ಇತರ ಸೌಲಭ್ಯ ಕಲ್ಪಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಮಂಗಳವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ವಿಚಾರಣಾಧೀನ ಕೈದಿಗೆ ನೀಡಬಹುದಾದ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿ ಇತರೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಂತೆ ಕೇಳುತ್ತಿದ್ದೇವೆ. ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನು ಕೊಡಲಿ. ಯಾವ ಕಾನೂನಿನ ಅಡಿ ಈ ಸೌಲಭ್ಯ ಕೊಡಲಾಗುವುದಿಲ್ಲವೆಂದು ಜೈಲು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಆರೋಪಿಗೆ ಜೈಲಿನಲ್ಲಿ ಸೆಲೆಬ್ರಿಟಿ ಸ್ಥಾನಮಾನ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆಯೇ ಹೊರತು ವಿಚಾರಣಾಧೀನ ಕೈದಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಬಾರದು ಎಂದು ಹೇಳಿಲ್ಲ. ಹಾಸಿಗೆ, ಹೊದಿಕೆ, ತಲೆದಿಂಬು, ಸ್ವೆಟರ್‌ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ಬಗ್ಗೆ ಜೈಲು ಅಧಿಕಾರಿಗೆ ಮನವಿ ಮಾಡಿದ್ದೀರಾ ಎಂದು ದರ್ಶನ್‌ ಪರ ವಕೀಲರನ್ನು ಪ್ರಶ್ನಿಸಿದರು. ದರ್ಶನ್‌ ಪರ ವಕೀಲರು ಮೌಖಿಕವಾಗಿ ಮಾಡಿರುವ ನಮ್ಮ ಮನವಿ ಬಗ್ಗೆ ಜೈಲು ಅಧಿಕಾರಿಗಳು ಉದಾಸೀನತೆ ತೋರುತ್ತಿದ್ದಾರೆ. ದರ್ಶನ್‌ ಶೂ ಹಾಕಿಕೊಂಡು ಹೋದರೆ ಶೂ ಬಿಚ್ಚಿಸುತ್ತಾರೆ. ದರ್ಶನ್‌ ಇರುವ ಕೊಠಡಿಗೆ ಊಟದ ತಟ್ಟೆಯನ್ನು ಎಸೆದು ಹೋಗುತ್ತಾರೆ ಎಂದು ಆರೋಪಿಸಿದರು.

ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ದರ್ಶನ್ ಜೈಲು ಸೇರಿದ ಎರಡು ದಿನದಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಕೈದಿಗಳ ಖರ್ಚಿನಲ್ಲಿ ಹಾಸಿಗೆ-ದಿಂಬು ಒದಗಿಸಲು ಅವಕಾಶವಿದೆಯಾದರೂ, ಕೊಲೆ ಆರೋಪಗಳನ್ನು ಎದುರಿಸುತ್ತಿರುವವರಿಗೆ ಈ ಅವಕಾಶವಿಲ್ಲ. ಆರೋಪಿಗಳಿಗೆ ತಪಾಸಣೆ ನಡೆಸಿ ಪುಸ್ತಕ, ದಿನಪತ್ರಿಕೆಗಳನ್ನು ಒದಗಿಸಬಹುದು. ಯಾರೇ ಆರೋಪಿಯಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಆರೋಪಿಗೆ ರಾಜಾತಿಥ್ಯ ನೀಡಿದರೆ ಜೈಲು ಅಧಿಕಾರಿಯನ್ನು ಅಮಾನತು ಮಾಡಲಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಮತ್ತೊಂದೆಡೆ ದರ್ಶನ್‌ ಅನ್ನು ಬೆಂಗಳೂರಿನಿಂದ ಬಳ್ಳಾರಿಗೆ ಜೈಲಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಮಾಡಿರುವ ಮನವಿಗೆ ಆಕ್ಷೇಪಿಸಿದ ದರ್ಶನ್‌ ಪರ ವಕೀಲರು, ಸುಪ್ರೀಂಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಿದೆಯೇ ಹೊರತು ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿಲ್ಲ. ಜೈಲಿನಲ್ಲಿ ಧೂಮಪಾನ ಮಾಡಿದ್ದಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಅದೇ ಕಾರಣದಿಂದ ಬಳ್ಳಾರಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ. ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸೂಚಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 272 ಸಾಕ್ಷಿಗಳಿದ್ದಾರೆ. ಬಳ್ಳಾರಿ ಹಾಗೂ ಬೆಂಗಳೂರಿನ ನಡುವೆ 310 ಕಿ.ಮೀ. ಅಂತರವಿದೆ. ಪ್ರತಿ ಬಾರಿ ವಿಚಾರಣೆ ಸಮಯದಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಮನವಿಯನ್ನು ಬಲವಾಗಿ ಆಕ್ಷೇಪಿಸಿದ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್‌, ಜಾಮೀನು ರದ್ದುಪಡಿಸಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ಆರೋಪಿಗಳು ಜೈಲಿನಲ್ಲಿ ತೋರಿರುವ ವರ್ತನೆಗಳನ್ನು ಗಮನಿಸಿದೆ. ಹೀಗಿರುವಾಗ ಆರೋಪಿಗಳನ್ನು ಸ್ಥಳಾಂತರಿಸಲು ಬೇರೆ ಕಾರಣಗಳ ಅಗತ್ಯವಿಲ್ಲ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಕೋರ್ಟ್‌ಗಳು ಹಾಗೂ ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ (ವಿಸಿ) ಸೌಲಭ್ಯಗಳಿವೆ. ಆರೋಪಿ ಎಲ್ಲಿದ್ದರೂ ವಿಸಿ ಮೂಲಕ ವಿಚಾರಣೆಗೆ ಹಾಜರುಪಡಿಸಬಹುದಾಗಿದೆ. ಇನ್ನು ವಕೀಲರು ಹಾಗೂ ಕುಟುಂಬದವರ ಜತೆ ಮಾತನಾಡಲು ಇ-ಮುಲಾಕಾತ್ ಎಂಬ ವ್ಯವಸ್ಥೆ ಪರಿಚಯಿಸಲಾಗಿದೆ. ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ದರ್ಶನ್‌ ಪರ ವಕೀಲರು, ವಿಸಿ ಮೂಲಕ ವಿಚಾರಣೆಗೆ ಹಾಜರಾಗುವುದು ಸೂಕ್ತವಲ್ಲ. ಆರೋಪಿಗಳು ತಮ್ಮ ವಕೀಲರ ಜತೆ ಮಾತನಾಡುವ ಅಗತ್ಯವಿರುತ್ತದೆ. ವಿಸಿ ಮೂಲಕ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ, ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರಿಸಬಾರದು ಎಂದು ಮನವಿ ಮಾಡಿದರು.

ಎರಡೂ ಅರ್ಜಿಗಳ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ದಿನದ ಕಲಾಪದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರ ಸಂಜೆ 4 ಗಂಟೆಗೆ ಮುಂದೂಡಿತು.