ಸಾರಾಂಶ
ನಗರದ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡ ಕುಸಿತ ಅವಘಡದಲ್ಲಿ ಅವಶೇಷಗಳ ಅಡಿ ಸಿಲುಕಿದ್ದ ಮತ್ತೊಂದು ಮೃತದೇಹವನ್ನು ಶುಕ್ರವಾರ ಹೊರಗೆ ತೆಗೆಯಲಾಗಿದೆ.
ಬೆಂಗಳೂರು : ನಗರದ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡ ಕುಸಿತ ಅವಘಡದಲ್ಲಿ ಅವಶೇಷಗಳ ಅಡಿ ಸಿಲುಕಿದ್ದ ಮತ್ತೊಂದು ಮೃತದೇಹವನ್ನು ಶುಕ್ರವಾರ ಹೊರಗೆ ತೆಗೆಯಲಾಗಿದೆ. ಈ ಮೂಲಕ ಅವಘಡದಲ್ಲಿ ಮೃತ ಕಾರ್ಮಿಕರ ಸಂಖ್ಯೆ 9ಕ್ಕೆ ಏರಿಯಾಗಿದೆ.
ಅವಶೇಷಗಳ ಅಡಿಯಿಂದ ಹೊರಗೆ ತೆಗೆದಿರುವ ಮೃತದೇಹ ಮೇಸ್ತ್ರಿ ಏಳುಮಲೈ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಎಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಂಗಳವಾರ ಮಧ್ಯಾಹ್ನ 3.40ಕ್ಕೆ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡ ಕುಸಿದಿತ್ತು. ಈ ಕಟ್ಟಡ ಕಾಮಗಾರಿಯಲ್ಲಿ ಬಿಹಾರ, ಉತ್ತರಪ್ರದೇಶ, ತಮಿಳನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕಕ್ಕೆ ಸೇರಿದ 24 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಟದ ಬಳಿಕ ರಕ್ಷಣಾ ಕಾರ್ಯಾಚರಣೆ ಕೈಗೊಂಡು 14 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಈ ಪೈಕಿ ಆರು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಮಂಗಳವಾರ ಓರ್ವ, ಬುಧವಾರ ಐವರು, ಗುರುವಾರ ಇಬ್ಬರು ಸೇರಿ 8 ಮಂದಿ ಕಾರ್ಮಿಕರ ಮೃತದೇಹಗಳನ್ನು ಕಟ್ಟಡಗಳ ಅವಶೇಷಗಳ ಅಡಿ ಪತ್ತೆಹಚ್ಚಿ ಹೊರಗೆ ತರಲಾಗಿತ್ತು. ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರೆಸಿದ್ದು, ಮೇಸ್ತ್ರಿ ಏಳುಮಲೈ ಮೃತದೇಹ ಪತ್ತೆಯಾಗಿದ್ದು, ಹೊರಗೆ ತೆಗೆಯಲಾಗಿದೆ. ಈಗಾಗಲೇ ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ಸೇರಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.