ಸಾರಾಂಶ
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ಪರಿಚಯವಿರುವ ರೌಡಿಗೆ ಬಟ್ಟೆಯಲ್ಲಿ ಅಡಗಿಸಿ ಮೊಬೈಲ್ ತಂದುಕೊಟ್ಟಿದ್ದ ಟ್ರಾವೆಲ್ಸ್ ಏಜೆನ್ಸಿ ಮಾಲಿಕನೊಬ್ಬನಿಗೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರ ತನಿಖೆ ಬಿಸಿ ತಟ್ಟಿದೆ.
ಬಾಣಸವಾಡಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಿಕ ಮಣಿವಣ್ಣನ್ ಮೇಲೆ ಆರೋಪ ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಧರ್ಮನ ವಿಚಾರಣೆ ವೇಳೆ ಮಣಿ ಪಾತ್ರದ ಬಗ್ಗೆ ಸುಳಿವು ಸಿಕ್ಕಿತು. ಬಳಿಕ ಆತನ ಮೊಬೈಲ್ ಕರೆಗಳ ತಪಾಸಣೆ ನಡೆಸಿದಾಗ ಜೈಲಿಗೆ ಅಕ್ರಮವಾಗಿ ಮೊಬೈಲ್ ಪೂರೈಕೆ ಬಗ್ಗೆ ಮತ್ತಷ್ಟು ಸಂಗತಿ ತಿಳಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿ ಧರ್ಮನ ಮೊಬೈಲ್‌ನಲ್ಲಿ ವಾಟ್ಸ್ ಆಪ್ ವಿಡಿಯೋ ಕಾಲ್‌ನಲ್ಲಿ ನಟ ದರ್ಶನ್ ಮಾತನಾಡಿದ್ದ ವಿಡಿಯೋ ತುಣುಕು ಬಹಿರಂಗವಾಗಿ ವಿವಾದವಾಗಿತ್ತು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಮೊಬೈಲ್ ಮೂಲ ಕೆದಕಿದಾಗ ಮಣಿ ಜಾಲ ಪತ್ತೆಯಾಗಿದೆ.
ಹಲವು ವರ್ಷಗಳಿಂದ ರೌಡಿ ಧರ್ಮನ ಜತೆ ಬಾಸಣವಾಡಿಯಲ್ಲಿ ಟ್ರಾವೆಲ್ಸ್ ಏಜೆನ್ಸಿ ಹೊಂದಿರುವ ಮಣಿಗೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲಿ ಆತನಿಗೆ ತಮ್ಮ ಏಜೆನ್ಸಿ ಕೆಲಸಗಾರ ಯಾದವ್ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಬಳಿಕ ಅದನ್ನು ಬಟ್ಟೆಯಲ್ಲಿ ಅಡಗಿಸಿ ಮಣಿ ಕೊಟ್ಟಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮೊಬೈಲ್ ಅನ್ನು ಮೆಜೆಸ್ಟಿಕ್ ಸಮೀಪ ಆತ ಖರೀದಿಸಿದ್ದ. ಈ ಮೊಬೈಲ್ ಕೊಳ್ಳುವ ಮುನ್ನ ಅದರ ಪೋಟೋವನ್ನು ಧರ್ಮನಿಗೆ ವಾಟ್ಸ್ ಆಪ್ ಮಾಡಿದ್ದ. ಬಳಿಕ ಆತ ಇಷ್ಟಪಟ್ಟ ಸ್ಯಾಮ್ ಸಂಗ್ ಮೊಬೈಲ್ ಅನ್ನೇ ಖರೀದಿಸಿ ಮಣಿ ಜೈಲಿಗೆ ಸಾಗಿಸಿದ್ದ ಎಂದು ಮೂಲಗಳು ಹೇಳಿವೆ.