ಕಾಂಚಾಣದ ದುರಾಸೆಗೆ ಬಿದ್ದು ಅಪರಾಧ ಕೃತ್ಯಗಳಲ್ಲಿ ಪೊಲೀಸರ ಪಾಲ್ಗೊಳ್ಳುವಿಕೆಗೆ ಮುಂದುವರಿದಿದ್ದು, ಈಗ ಕೇರಳದ ವ್ಯಾಪಾರಿಗಳಿಗೆ ಇಲಾಖೆ ಜೀಪಿನಲ್ಲೇ ಹೋಗಿ ಬೆದರಿಸಿ 20 ಲಕ್ಷ ರು ಹಣ ಸುಲಿಗೆ ಮಾಡಿದ್ದ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಓರ್ವ ಇನ್ಸ್‌ಪೆಕ್ಟರ್ ಹಾಗೂ ಅವರ ಇಬ್ಬರು ಸಹಚರರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಕಾಂಚಾಣದ ದುರಾಸೆಗೆ ಬಿದ್ದು ಅಪರಾಧ ಕೃತ್ಯಗಳಲ್ಲಿ ಪೊಲೀಸರ ಪಾಲ್ಗೊಳ್ಳುವಿಕೆಗೆ ಮುಂದುವರಿದಿದ್ದು, ಈಗ ಕೇರಳದ ವ್ಯಾಪಾರಿಗಳಿಗೆ ಇಲಾಖೆ ಜೀಪಿನಲ್ಲೇ ಹೋಗಿ ಬೆದರಿಸಿ 20 ಲಕ್ಷ ರು ಹಣ ಸುಲಿಗೆ ಮಾಡಿದ್ದ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಓರ್ವ ಇನ್ಸ್‌ಪೆಕ್ಟರ್ ಹಾಗೂ ಅವರ ಇಬ್ಬರು ಸಹಚರರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಅವರ ಸ್ನೇಹಿತರಾದ ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧನವಾಗಿದ್ದು, ಆರೋಪಿಗಳಿಂದ ಹಣ ಜಪ್ತಿ ಮಾಡಲಾಗಿದೆ. 4 ದಿನಗಳ ಹಿಂದೆ ಕೇರಳ ಮೂಲದ ಜನೀಶ್ ಬಾಬು ಹಾಗೂ ನವೀನ್ ಅವರಿಗೆ ಬೆದರಿಸಿ ಇನ್ಸ್‌ಪೆಕ್ಟರ್ ತಂಡ ಸುಲಿಗೆ ಮಾಡಿತ್ತು. ಈ ಬಗ್ಗೆ ಮಡಿವಾಳ ಠಾಣೆಗೆ ಸಂತ್ರಸ್ತರು ದೂರು ನೀಡಿದರು.
ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದರು. ಘಟನಾ ಸ್ಥಳದ ಸುತ್ತಮುತ್ತಲಿನ ಕಟ್ಟಡದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಕಳ್ಳಾಟ ಬಯಲಾಗಿದೆ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಎಟಿಎಂ 7 ಕೋಟಿ ರು. ಹಣ ದರೋಡೆ ಪ್ರಕರಣದಲ್ಲಿ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್, ಕೆಲ ದಿನಗಳ ಹಿಂದಷ್ಟೇ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ರಾಜಸ್ಥಾನದಲ್ಲಿ ಎಚ್‌ಎಎಲ್ ಠಾಣೆ ಪಿಎಸ್‌ಐ ಅನಿತಾ ಹಾಗೂ ಇಬ್ಬರ ಪೊಲೀಸರು ಬಂಧನವಾಗಿತ್ತು.
ಈಗ ಸಿಐಡಿ ಇನ್ಸ್‌ಪೆಕ್ಟರ್ ಕನಕಗಿರಿ ಸಿಕ್ಕಿಬಿದ್ದಿದ್ದಾರೆ.
ಹೇಗೆ ದರೋಡೆ:
ಜೂ.15 ರಂದು ಟ್ರೇಡಿಂಗ್ (ಷೇರು ಮಾರುಕಟ್ಟೆ)ನಲ್ಲಿ ಹಣ ಹೂಡಿಕೆ ಸಂಬಂಧ ಸ್ನೇಹಿತ ನವೀನ್ ಜತೆ ಮಾತುಕತೆಗೆ ನಗರಕ್ಕೆ ಕೇರಳದ ಜನೀಶ್ ಬಾಬು ಬಂದಿದ್ದರು. ಟ್ರೇಡಿಂಗ್‌ನಲ್ಲಿ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಬಾಬುಗೆ ಆತನ ಸ್ನೇಹಿತ ಹೇಳಿದ್ದರು. ಅಂತೆಯೇ ನಗರಕ್ಕೆ ಬಂದು ಮಡಿವಾಳದ ವೈಟ್ ಸ್ಟೋನ್ ಲಾಡ್ಜ್‌ನಲ್ಲಿ ಅವರು ತಂಗಿದ್ದರು.
ಆ ಲಾಡ್ಜ್ ಮೇಲೆ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಅವರ ಸ್ನೇಹಿತರು ದಾಳಿ ನಡೆಸಿದ್ದಾರೆ. ‘ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಿಗಿರುವ ಬಗ್ಗೆ ಮಾಹಿತಿ ಬಂದಿದೆ. ಈ ಕೂಡಲೇ ಬಂಧಿಸುತ್ತೇವೆ ಎಂದು ಕೇರಳದ ವ್ಯಾಪಾರಿಗೆ’ ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರು.ಸುಲಿಗೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಮಡಿವಾಳ ಠಾಣೆಗೆ ಬಾಬು ದೂರು ನೀಡಿದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಹೇಶ್ ಕಳ್ಳಾಟ ಬಯಲಾಗಿದೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಶುಕ್ರವಾರ ಡಿಸಿಪಿ ಮೊಹಮ್ಮದ್ ಸುಜೀತಾ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನಗರದಲ್ಲೇ ಇಡೀ ಸರ್ವೀಸ್:
ತಮ್ಮ ಸೇವಾವಧಿಯನ್ನು ಬಹುಪಾಲು ಬೆಂಗಳೂರು ನಗರದಲ್ಲೇ ಮಹೇಶ್ ಕನಕಗಿರಿ ಕಳೆದಿದ್ದಾರೆ. ಹಲಸೂರು, ರಾಮಮೂರ್ತಿನಗರ ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ಪಿಎಸ್‌ಐ ಆಗಿದ್ದರು. ಆನಂತರ ಬಂಡೇಪಾಳ್ಯ ಹಾಗೂ ಸಿಸಿಬಿ ಸೇರಿದಂತೆ ಇತರೆಡೆ ಪಿಐ ಆಗಿ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ಮುಂಬಡ್ತಿ ನಿರೀಕ್ಷೆಯಲ್ಲಿ ಕನಕಗಿರಿ
ಸೇವಾ ಹಿರಿತನ ಆಧಾರದ ಮೇರೆಗೆ ಡಿವೈಎಸ್ಪಿ ಹುದ್ದೆಗೆ ಮಹೇಶ್ ಕನಕಗಿರಿ ನಿರೀಕ್ಷೆಯಲ್ಲಿದ್ದರು. ಈ ಸಲುವಾಗಿ ಸಿಐಡಿಯಲ್ಲಿ ಹುದ್ದೆ ಪಡೆದು ಬಡ್ತಿಗೆ ಸರ್ಕಾರದ ಮಟ್ಟದಲ್ಲಿ ಅವರು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸುಲಿಗೆ ಕೇಸಲ್ಲಿ ಬಚಾವ್ , ಈಗ ಲಾಕ್4
ತಿಂಗಳ ಹಿಂದೆ ಬಂಡೇಪಾಳ್ಯ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ ಮಹೇಶ್ ಕನಕಗಿರಿ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿತ್ತು. ಯಲಹಂಕದಿಂದ ಇಬ್ಬರು ಉದ್ಯಮಿಗಳನ್ನು ಕರೆತಂದು ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಹಣ ವಸೂಲಿಗೆ ಯತ್ನಿಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಗೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಬಗ್ಗೆ ಇಲಾಖಾ ಮಟ್ಟದ ವಿಚಾರಣೆಗೆ ಸೂಚಿಸಿದ ಆಯುಕ್ತರು, ಕೂಡಲೇ ಬಂಡೇಪಾಳ್ಯ ಠಾಣೆಯಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಮಹೇಶ್ ಅವರನ್ನು ಎತ್ತಂಗಡಿ ಮಾಡಿದ್ದರು. ಆಗ ಶಿಸ್ತು ಕ್ರಮದ ಭೀತಿಗೊಳಾಗಿದ್ದ ಮಹೇಶ್, ತಮ್ಮ ಸಂಪರ್ಕ ಬಳಸಿ ಸಿಐಡಿಗೆ ವರ್ಗಾವಣೆ ಮಾಡಿಸಿಕೊಂಡು ಬೀಸೋ ದೊಣ್ಣೆಯಿಂದ ಪರಾಗಿದ್ದರು ಎಂದು ತಿಳಿದು ಬಂದಿದೆ.
ಸ್ನೇಹಿತರಿಂದ ಪೊಲೀಸ್‌ಗೆ ಮಾಹಿತಿ
ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಅವರು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರಿಗೆ ಬಾತ್ಮಿದಾರರದಾಗಿ ಕೆಲಸ ಮಾಡುತ್ತಿದ್ದರು. ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಸಂಬಂಧ ಸ್ನೇಹಿತ ನವೀನ್ ಜತೆ ಮಾತುಕತೆಗೆ ನಗರಕ್ಕೆ ಕೇರಳದ ಜನೀಶ್ ಬಾಬು ಬಂದಿರುವ ಮಾಹಿತಿಯನ್ನು ಇವರು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿಗೆ ತಿಳಿಸಿದ್ದರು.
