ಹಲಗೂರು:

ಮಳವಳ್ಳಿ ತಾಲೂಕು ಭೀಮನಹಳ್ಳಿಯ ಮಹೇಶ್ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸಿದ್ದರಾಜು ಪ್ರಕರಣದ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಾಲಿಗೆ ಗುಂಡು ಹಾರಿಸಿರುವ ಘಟನೆ ಸಮೀಪದ ಡಿ.ಹಲಸಹಳ್ಳಿ ಬಳಿಯ ಶ್ರೀಸಾಯಿ ಬಾಬಾ ದೇವಸ್ಥಾನ ಬಳಿ ನಡೆದಿದೆ.

ಕಳೆದ ಮಂಗಳವಾರ ರಾತ್ರಿ ಭೀಮನಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಸ್ಥಳ ಮಹಜರು ವೇಳೆ ಆರೋಪಿ ಸಿದ್ದರಾಜು ಅಲಿಯಾಸ್ ಸೀಜರ್ ಸಿದ್ದು (33) ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಮಹಿಳೆಗೆ ಮೇಸೆಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಹೇಶ್ ನನ್ನು ನಾಲ್ವರು ಆರೋಪಿಗಳು ಚಾಕುವಿನಿಂದ ಇರಿದು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಘಟನೆ ಸಂಬಂಧ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಿದ್ದರಾಜು, ರಾಜೇಶ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದರು.

ಕೃತ್ಯಕ್ಕೆ ಬಳಸಿದ ಚಾಕುವನ್ನು ಡಿ.ಹಲಸಹಳ್ಳಿಯ ಬಳಿ ಶ್ರೀಸಾಯಿ ಬಾಬಾ ದೇವಸ್ಥಾನ ಸಮೀಪದ ರಸ್ತೆಯಲ್ಲಿ ಎಸೆದಿದ್ದರು. ಅದಕ್ಕಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಸ್ಥಳ ಮಹಜರು ಮಾಡಿ ಚಾಕು ವಶಪಡಿಸಿಕೊಳ್ಳಲು ಮುಂದಾಗುತ್ತಿದ್ದ ವೇಳೆ ಆರೋಪಿ ಸಿದ್ದರಾಜು ಪೊಲೀಸ್ ಮುಖ್ಯಪೇದೆ ಪ್ರಭುಸ್ವಾಮಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.


ತಕ್ಷಣ ಪಿಎಸ್ಐ ಡಿ.ರವಿಕುಮಾರ್ ಆರೋಪಿ ಸಿದ್ದರಾಜು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮುಖ್ಯಪೇದೆ ಪ್ರಭುಸ್ವಾಮಿ ಹಾಗೂ ಆರೋಪಿ ಸಿದ್ದರಾಜುಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕ್ರೇನ್ ಗೆ ಬೈಕ್ ಡಿಕ್ಕಿ: ಸವಾರ ಸಾವು

ಮಳವಳ್ಳಿ: ಕ್ರೇನ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-948ರ ಬೋಸೇಗೌಡನದೊಡ್ಡಿ ಗೇಟ್ ಬಳಿ ಗುರುವಾರ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಬಂಡಹಳ್ಳಿ ಎಸ್.ಮಾದೇಶ್ (36) ಮೃತಪಟ್ಟವರು. ಗುರುವಾರ ಮಧ್ಯಾಹ್ನ ಎಸ್.ಮಾದೇಶ್ ತಮ್ಮ ಬೈಕ್‌ನಲ್ಲಿ ಮಳವಳ್ಳಿಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ -948ರ ಬೋಸೇಗೌಡನದೊಡ್ಡಿ ಗೇಟ್ ಬಳಿ ಹೋಗುತ್ತಿದ್ದ ಕ್ರೇನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಮಾದೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.