ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಾವುದೇ ಕಾರಣಕ್ಕೂ ರೇವ್ ಪಾರ್ಟಿ ಸೇರಿದಂತೆ ಕಾನೂನುಬಾಹಿರ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದರು.

ವರ್ಷಾಚರಣೆ ಸುಸೂತ್ರವಾಗಿ ನೆರವೇರಲು ಮುನ್ನೆಚ್ಚರಿಕೆ ವಹಿಸಲಾಗಿದೆ. ಅನಧಿಕೃತ ಪಾರ್ಟಿಗಳು ಅ‍ಸ್ಪದ ಕೊಡುವುದಿಲ್ಲ. ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರ ಸುರಕ್ಷತೆಗೆ ಗಮನ: ಇನ್ನು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ಸಹಾಯ ವಾಣಿ (ಹೆಲ್ಪ್ ಡೆಸ್ಕ್‌) ಸ್ಥಾಪಿಲಾಗುತ್ತದೆ. ರಾಣಿ ಚೆನ್ನಮ್ಮ ಪಡೆಗಳು ಕಾರ್ಯನಿರ್ವಹಿಸಲಿವೆ. ಮಹಿಳೆಯರು ಕೆಎಸ್‌ಪಿ ಆ್ಯಪ್‌ ಮುಖಾಂತರ ಪೊಲೀಸರ ನೆರವು ಪಡೆಯಬಹುದು. ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ 112) ಕರೆ ಮಾಡಿದರೆ ಕೆಲವೇ ಸೆಕೆಂಡ್‌ಗಳಲ್ಲಿ ಸಹಾಯಕ್ಕೆ ಸಿಬ್ಬಂದಿ ಧಾವಿಸಲಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಅತಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಲ್ಲದೆ ಕೃತಕ ಬುದ್ಧಿಮತ್ತೆ (ಎಐ-ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಇವು ನೇರವಾಗಿ ಕಮಾಂಡ್‌ ಸೆಂಟರ್‌ಗೆ ಸಂಪರ್ಕ ಇರಲಿವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಹಾಕೆ ಹಾಗೂ ಸಿಸಿಬಿ ಡಿಸಿಪಿ ರಾಜಾ ಇಮಾಮ್‌ ಕಾಸಿಂ ಉಪಸ್ಥಿತರಿದ್ದರು.

ಪೊಲೀಸರ ಜತೆ ಓಲಾ, ಉಬರ್‌ ಸಾಥ್‌:

ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತಾ ವ್ಯವಸ್ಥೆಗೆ ಪೊಲೀಸರ ಜತೆ ಓಲಾ ಹಾಗೂ ಉಬರ್ ಕಂಪನಿಗಳು ಸಹಕಾರ ನೀಡಿವೆ ಎಂದು ಸೀಮಂತ್ ಕುಮಾರ್ ತಿಳಿಸಿದರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವ ಓಲಾ ಹಾಗೂ ಉಬರ್ ಕಂಪನಿಗಳ ಗ್ರಾಹಕರಿಗೆ ಪೊಲೀಸರು ನೆರವು ಸಿಗಲಿದೆ. ಈ ಎರಡು ಕಂಪನಿಗಳ ಆ್ಯಪ್‌ಗಳಲ್ಲಿ ತುರ್ತು ಸ್ಪಂದನೆಗೆ ನಮ್ಮ-112 ಸಂಖ್ಯೆಯನ್ನು ಜೋಡಿಸಲಾಗಿದೆ. ಹೀಗಾಗಿ ತೊಂದರೆ ಎದುರಾದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗೆ ಸ್ಕ್ಯಾನ್‌ ಮಾಡಿ:

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಭದ್ರತೆ, ಸುರಕ್ಷತಾ ವ್ಯವಸ್ಥೆ ಸಂಚಾರ ಮಾರ್ಗ ಬದಲಾವಣೆ ಹಾಗೂ ಸಾರಿಗೆ ಸೌಲಭ್ಯ ಸೇರಿದಂತೆ ಪ್ರತಿಯೊಂದರ ಮಾಹಿತಿಯೂ ಸಾರ್ವಜನಿಕರಿಗೆ ಪೊಲೀಸರು ಕ್ಷಣ ಕ್ಷಣಕ್ಕೂ ಮಾಹಿತಿ ನೀಡಲಿದ್ದಾರೆ. ಇದಕ್ಕೆ ನಗರ ಪೊಲೀಸ್ ವೆಬ್ ಸೈಟ್‌ ಹಾಗೂ ಸಾಮಾಜಿಕ ಜಾಲತಾಣಗಳ ಪೊಲೀಸರ ಅಧಿಕೃತ ಖಾತೆಗಳಲ್ಲಿರುವ ನೀಡಿರುವ ಸ್ಕ್ಯಾನರ್ ಬಳಸುವಂತೆ ಆಯುಕ್ತರು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷಾಚರಣೆಗೆ ನಿಮಿತ್ತ ‘ಜವಾಬ್ದಾರಿಯಿಂದ ಆಚರಿಸೋಣ’ ಎಂಬ ಹೆಸರಿನಲ್ಲಿ ನಗರ ಪೊಲೀಸರು ಜಾಗೃತಿ ಅಭಿಯಾನ ಶುರು ಮಾಡಿದ್ದಾರೆ. ಎಕ್ಸ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.