ಸಾರಿಗೆ ಬಸ್ ಎತ್ತಿನಗಾಡಿಗೆ ಡಿಕ್ಕಿಯಾಗಿ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ ಹಲಗೂರು ಸಮೀಪದ ನಡಕಲಪುರ ಗೇಟ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ಹಲಗೂರು:

ಸಾರಿಗೆ ಬಸ್ ಎತ್ತಿನಗಾಡಿಗೆ ಡಿಕ್ಕಿಯಾಗಿ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ನಡಕಲಪುರ ಗೇಟ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಸಮೀಪದ ಬ್ಯಾಡರಹಳ್ಳಿಯಿಂದ ವ್ಯವಸಾಯ ಮಾಡಲು ಎತ್ತುಗಳನ್ನು ಅಣ್ಣಹಳ್ಳಿ ಶಿವಕುಮಾರ್ ಅವರು ಕರೆ ತಂದಿದ್ದರು. ಸೋಮವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಮಳವಳ್ಳಿ ಕಡೆಯಿಂದ ಹಲಗೂರು ಕಡೆಗೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎತ್ತು ಸ್ಥಳದಲ್ಲೇ ಮೃತಪಟ್ಟಿದೆ. ಬಸ್ ಚಾಲಕ ಅಪಘಾತ ಮಾಡಿ ಬಸ್ ಸಮೇತ ಪರಾರಿಯಾಗಿದ್ದಾನೆ.

ರಸ್ತೆ ತಡೆದು ಪ್ರತಿಭಟನೆ:

ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬಸ್ ಸಂಚಾರದಲ್ಲಿ ತೊಂದರೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಲೋಕೇಶ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ಈಜಲು ಹೋದ ಯುವಕ ನದಿಯಲ್ಲಿ ಮುಳುಗಿ ಸಾವು

ಹಲಗೂರು:

ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಸೋಮನಹಳ್ಳಿಯ ಪ್ರಹ್ಲಾದ್ (21) ಮೃತಪಟ್ಟ ಯುವಕ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಶನಿವಾರ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದನು. ಕಾವೇರಿ ನದಿಯಲ್ಲಿ ಈಜಾಡಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಭಾನುವಾರ ನುರಿತ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.