ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ರೊಚ್ಚಿಗೆದ್ದು ಕಾರು, ಬೈಕ್‌ಗೆ ಬೆಂಕಿ ಹಚ್ಚಿದ ರೌಡಿ

| N/A | Published : Feb 24 2025, 12:31 AM IST / Updated: Feb 24 2025, 05:09 AM IST

ಸಾರಾಂಶ

ಪ್ರೀತಿಸಿ ನಿರಾಕರಿಸಿದಳು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಕುಖ್ಯಾತ ರೌಡಿ ಶೀಟರ್‌ ಯುವತಿ ಮನೆ ಬಳಿ ತೆರಳಿ ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.

 ಬೆಂಗಳೂರು : ಪ್ರೀತಿಸಿ ನಿರಾಕರಿಸಿದಳು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಕುಖ್ಯಾತ ರೌಡಿ ಶೀಟರ್‌ ಯುವತಿ ಮನೆ ಬಳಿ ತೆರಳಿ ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಹನುಮಂತನಗರ ಠಾಣೆ ರೌಡಿ ಶೀಟರ್‌ ರಾಹುಲ್‌ ಅಲಿಯಾಸ್ ಸ್ಟಾರ್‌ ರಾಹುಲ್‌ (26) ಈ ಕೃತ್ಯ ಎಸಗಿದ್ದಾನೆ. ಕತ್ರಿಗುಪ್ಪೆ ಸಮೀಪದ ಬನಗಿರಿನಗರದಲ್ಲಿ ಶನಿವಾರ ತಡರಾತ್ರಿ ಮತ್ತು ಸುಬ್ರಹ್ಮಣ್ಯಪುರ ಸಮೀಪದ ಅರೇಹಳ್ಳಿಯಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.

ಪ್ರಕರಣದ ವಿವರ:

ರೌಡಿ ಶೀಟರ್‌ ರಾಹುಲ್‌ ಕಳೆದ ಐದು ವರ್ಷಗಳಿಂದ ರಕ್ಷಿತಾ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಪ್ರೇಮ ನಿವೇದನೆ ಮಾಡಿದಾಗ ಯುವತಿ ನಿರಾಕರಿಸಿ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಕೋಪಗೊಂಡಿದ್ದ ರಾಹುಲ್‌ ತನ್ನ ಸಹಚರರೊಂದಿಗೆ ಶನಿವಾರ ತಡರಾತ್ರಿ ಸುಮಾರು 12.30ಕ್ಕೆ ರಕ್ಷಿತಾ ತಂದೆ ಮತ್ತು ಸಹೋದರ ನೆಲೆಸಿರುವ ಬನಗಿರಿನಗರದ ಮನೆ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿ ರಕ್ಷಿತಾ ಇಲ್ಲದಿರುವ ವಿಚಾರ ತಿಳಿದು ಮನೆ ಎದುರು ನಿಲ್ಲಿಸಿದ್ದ ರಕ್ಷಿತಾಳ ತಂದೆಯ ಕಾರು ಮತ್ತು ಸಹೋದರನ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಗಿನೆ.

ಭಾನುವಾರ ಮುಂಜಾನೆ ಸುಮಾರು 2ಕ್ಕೆ ರಕ್ಷಿತಾ ಮತ್ತು ಅವರ ತಾಯಿ ನೆಲೆಸಿರುವ ಅರೇಹಳ್ಳಿಯ ಅಪಾರ್ಟ್‌ಮೆಂಟ್‌ ಬಳಿ ಬಂದು ಗಲಾಟೆ ಮಾಡಿರುವ ರಾಹುಲ್‌ ಹಾಗೂ ಆತನ ಸಹಚರರು, ನೆಲಮಹಡಿಯಲ್ಲಿ ನಿಲುಗಡೆ ಮಾಡಿದ್ದ ರಕ್ಷಿತಾ ಅವರ ತಾಯಿಯ ಕಾರಿಗೆ ಬೆಂಕಿ ಹಚ್ಚಿಸಿದ್ದಾನೆ. ಇದನ್ನು ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್‌ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾನೆ. ರಕ್ಷಿತಾ ಅವರ ತಾಯಿಯ ಕಾರಿಗೆ ಹಚ್ಚಿದ ಬೆಂಕಿ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಕಾರಿಗೆ ವ್ಯಾಪಿಸಿದ್ದು, ಬಹುತೇಕ ಈ ಎರಡೂ ಕಾರುಗಳು ಸುಟ್ಟು ಹೋಗಿವೆ.

ತಪ್ಪಿದ ಭಾರೀ ಅನಾಹುತ:

ನೆಲಮಹಡಿಯ ಇತರೆ ವಾಹನಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇದುದ್ದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಎರಡೂ ಘಟನೆ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಮತ್ತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾನು ಕೊಡಿಸಿದ್ದ ಕಾರಿಗೂ ಬೆಂಕಿ?

ರೌಡಿ ರಾಹುಲ್‌ ಪ್ರೇಮದ ಸಂಕೇತವಾಗಿ ರಕ್ಷಿತಾಗೆ ಇತ್ತೀಚೆಗೆ ಕಾರೊಂದನ್ನು ಗಿಫ್ಟ್‌ ನೀಡಿದ್ದ ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ರಕ್ಷಿತಾ ನಿಲುಗಡೆ ಮಾಡಿದ್ದ ಆ ಕಾರಿಗೂ ರಾಹುಲ್‌ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆ ಬಳಿಕ ರಕ್ಷಿತಾ ಹಾಗೂ ಆಕೆಯ ಪೋಷಕರು ಭಯಗೊಂಡು ಬೆಂಗಳೂರು ತೊರೆದಿದ್ದಾರೆ.

---ಈ ಹಿಂದೆ ಗುಂಡು ಹಾರಿಸಿ ಬಂಧನ

ರಾಹುಲ್‌ ಅಲಿಯಾಸ್‌ ಸ್ಟಾರ್ ಹನುಮಂತನಗರ ಠಾಣೆ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ 18 ಕೇಸ್‌ಗಳಿವೆ. 2022ರಲ್ಲಿ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ರಾಹುಲ್‌, ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಾಕತ್‌ ಇದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ಇದರ ಬೆನ್ನಲ್ಲೇ ಹನುಮಂತನಗರ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರಾಹುಲ್‌ ಕಾಲಿಗೆ ಪಿಎಸ್‌ಐ ಬಸವರಾಜ್‌ ಪಾಟೀಲ್‌ ಗುಂಡು ಹಾರಿಸಿ ಬಂಧಿಸಿದ್ದರು.