ಖಾಸಗಿ ಬಸ್ ಡಿಕ್ಕಿ : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಪಾದಯಾತ್ರಿಗಳ ದುರ್ಮರಣ

| N/A | Published : Feb 24 2025, 12:31 AM IST / Updated: Feb 24 2025, 05:11 AM IST

ಸಾರಾಂಶ

ಖಾಸಗಿ ಬಸ್ ಡಿಕ್ಕಿಯಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ನಡೆದಿದೆ.

 ಕಿಕ್ಕೇರಿ : ಖಾಸಗಿ ಬಸ್ ಡಿಕ್ಕಿಯಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ನಡೆದಿದೆ.

ಆನೆಗೊಳ ಗ್ರಾಮದ ಚಾಮರಾಜ್ ಪುತ್ರ ಬಿ.ಸಿ.ಸುರೇಶ್ (60) ಹಾಗೂ ನರಸಿಂಹೇಗೌಡರ ಪುತ್ರ ಕುಮಾರ್ (55) ಮೃತಪಟ್ಟವರು.

ನಾಲ್ವರು ಯಾತ್ರಿಗಳು ಶನಿವಾರ ಸಂಜೆ ಆನೆಗೊಳದಿಂದ ಪಾದಯಾತ್ರೆ ಆರಂಭಿಸಿ ಶಿವರಾತ್ರಿಗೆ ಧರ್ಮಸ್ಥಳಕ್ಕೆ ತಲುಪಲು ನಿಶ್ಚಯಿಸಿಕೊಂಡಿದ್ದರು. ಶನಿವಾರ ರಾತ್ರಿ ಹಾಸನ ಜಿಲ್ಲೆ ಶಾಂತಿ ಗ್ರಾಮದ ಟೋಲ್ ಬಳಿ ತಂಗಿದ್ದರು. ಭಾನುವಾರ ಮುಂಜಾನೆ ಯಾತ್ರೆ ಆರಂಭಿಸಿ ಕೆಂಚಟ್ಟಹಳ್ಳಿ ಬಳಿ ಸಾಗುವಾಗ ತಮಿಳುನಾಡಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಬಿ.ಸಿ.ಸುರೇಶ್ ಮರಾಠ ಸಮಾಜದವರಾಗಿದ್ದು ಗ್ರಾಮದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಕುಮಾರ್‌ ಅಕ್ಕಿಗಿರಣಿ ವ್ಯಾಪಾರಿಯಾಗಿದ್ದರು. ಮತ್ತೋರ್ವ ಗಂಭೀರ ಗಾಯಗೊಂಡಿರುವ ದಿನೇಶ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇವರ ಜೊತೆಯಲ್ಲಿದ್ದ ಅಶ್ವಥ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೃತ ವ್ಯಕ್ತಿಗಳಾದ ಬಿ.ಸಿ.ಸುರೇಶ್ ಹಾಗೂ ಕುಮಾರ್ ಶವವನ್ನು ಆನೆಗೊಳ ಗ್ರಾಮಕ್ಕೆ ತಂದು ಮೃತರ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಸ್ತೆ ಬದಿಗೆ ಉರುಳಿ ಬಿದ್ದ ಕಂಟೈನರ್ ಲಾರಿ: ಚಾಲಕ ಸಾವು

ನಾಗಮಂಗಲ: ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ತಾಲೂಕು ಕಾರಬೈಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದಿದೆ.

ಘಟನೆಯಲ್ಲಿ ಜಾರ್ಖಂಡ್ ಮೂಲದ ಜಯದೇವ ವರ್ಮ ಮೃತಪಟ್ಟ ದುರ್ದೈವಿ. ಈತ ಮೈಸೂರಿನ ಜೆಕೆ ಟೈರ್ ಕಂಪನಿಯಿಂದ ಕಂಟೈನರ್ ಲಾರಿಯಲ್ಲಿ ಟೈರ್‌ಗಳನ್ನು ತುಂಬಿಕೊಂಡು ಹೈದರಾಬಾದ್‌ಗೆ ಹೋಗುತ್ತಿದ್ದ ವೇಳೆ ತಾಲೂಕಿನ ಕಾರಬೈಲು ಗ್ರಾಮದ ಬಳಿ ಅತಿ ವೇಗವಾಗಿ ಚಲಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ.

ಘಟನೆಯಿಂದ ಚಾಲಕ ಜಯದೇವವರ್ಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಸಮೀಪದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.

ಈ ಸಂಬಂಧ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.