ಸಾರಾಂಶ
ನಾಗಮಂಗಲ : ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ವೇಳೆ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಶ್ರೀ ಆಂಜನೇಯಸ್ವಾಮಿ ಬೆಟ್ಟದ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಗ್ರಾಮದ ಜೈನಬಸದಿಗೆ ಸೇರಿದ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಉತ್ತರ ಕರ್ನಾಟಕ ಮೂಲದ ಹರಿಹಂತ್ ಪಾಟೀಲ್ ಹಾಗೂ ಪಾರ್ಥ ಅವರು ಸಿಡಿಮದ್ದು ಸ್ಫೋಟದಿಂದ ಗಾಯಗೊಂಡಿರುವ ವಿದ್ಯಾರ್ಥಿಗಳು.
ಕಂಬದಹಳ್ಳಿಯ ಜೈನ ಮಠದ ವಿದ್ಯಾರ್ಥಿ ನಿಲಯದ ಮಕ್ಕಳು ಗ್ರಾಮದ ಹೊರವಲಯದ ಶ್ರೀಆಂಜನೇಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಎಂದಿನಂತೆ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರು.
ಈ ವೇಳೆ ಕಸದ ರಾಶಿಗೆ ಇಬ್ಬರು ವಿದ್ಯಾರ್ಥಿಗಳು ಕೈ ಹಾಕುತ್ತಿದ್ದಂತೆ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹರಿಹಂತ್ ಪಾಟೀಲ್ ಬಲಗೈಗೆ ತೀವ್ರ ಗಾಯವಾಗಿದೆ. ಜೊತೆಯಲ್ಲಿದ್ದ ಪಾರ್ಥ ಎಂಬ ವಿದ್ಯಾರ್ಥಿ ಮುಖಕ್ಕೆ ಸಣ್ಣ ಪುಟ್ಟಗಾಯವಾಗಿದೆ.
ಸ್ಥಳದಲ್ಲಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿ ನಿಲಯದ ಸಿಬ್ಬಂದಿ ಗಾಯಾಳುಗಳನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರು. ಹರಿಹಂತ್ ಪಾಟೀಲ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಪಾರ್ಥನಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕಾಡು ಹಂದಿಗಳ ಬೇಟೆಗಾಗಿ ಕಿಡಿಗೇಡಿಗಳು ಕಸದ ರಾಶಿಯಲ್ಲಿ ಸಿಡಿಮದ್ದು ಇರಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಆವರಣದಲ್ಲಿ ಸಿಡಿಮದ್ದು ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನರೂ ಸೇರಿದಂತೆ ಭಕ್ತರು ಹಾಗೂ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ.
ಅಧಿಕಾರಿಗಳ ತಂಡ ಭೇಟಿ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್‌ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಬಿಂಡಿಗನವಿಲೆ ಪೊಲೀಸ್‌ಠಾಣೆ ಪಿಎಸ್‌ಐ ಮಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆಗೆ ತೆರಳಿ ಗಾಯಗೊಂಡಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಶಿಕ್ಷಕರು ಹಾಗೂ ಆಸ್ಪತ್ರೆ ವೈದ್ಯರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಬಾಂಬ್ ನಿಷ್ಕ್ರೀಯ ಮತ್ತು ಶ್ವಾನ ದಳದ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.