ಪತ್ನಿ ಕೊಂದು ಶವದ ಜತೆಗೇ ಮಲಗಿದ್ದ ಪತಿ!

| Published : Apr 08 2024, 01:06 AM IST / Updated: Apr 08 2024, 05:22 AM IST

ಸಾರಾಂಶ

ಕೌಟುಂಬಿಕ ಕಲಹದಿಂದ ಪತಿಯೊಬ್ಬ ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೈದಿರುವ ಅಮಾನುಷ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಕೌಟುಂಬಿಕ ಕಲಹದಿಂದ ಪತಿಯೊಬ್ಬ ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೈದಿರುವ ಅಮಾನುಷ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಂಗನಾಥಪುರ ನಿವಾಸಿ ನೇತ್ರಾವತಿ (32) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಪತಿ ವೆಂಕಟೇಶ್(35) ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಮೂಲದ ವೆಂಕಟೇಶ್ ಮತ್ತು ನೇತ್ರಾವತಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಪುತ್ರ ಇದ್ದಾನೆ. ಮೂವರು ಕಾಮಾಕ್ಷಿಪಾಳ್ಯದ ರಂಗನಾಥಪುರದ ಬಾಡಿಗೆ ಮನೆಯಲ್ಲೇ ನೆಲೆಸಿದ್ದರು. ವೆಂಕಟೇಶ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದರೆ, ಪತ್ನಿ ನೇತ್ರಾವತಿ ಮನೆಯಲ್ಲೇ ಇರುತ್ತಿದ್ದರು. ಅವರ ಪುತ್ರ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಮದ್ಯ ವ್ಯಸನಿ ಪತಿ:

ಆರೋಪಿ ವೆಂಕಟೇಶ್‌ ಮದ್ಯ ವ್ಯಸನಿಯಾಗಿದ್ದು, ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದ. ಕ್ಷುಲ್ಲಕ ಕಾರಣಗಳಿಗೆ ಪತ್ನಿ ಜತೆಗೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ. ಈತನ ಕಿರುಕುಳ ತಾಳಲಾರದೆ ನೇತ್ರಾವತಿ ತವರು ಮನೆಗೆ ವಿಚಾರ ತಿಳಿಸಿದ್ದಳು. ಬಳಿಕ ಎರಡೂ ಕಡೆಯ ಹಿರಿಯರು ಇಬ್ಬರ ಜತೆಗೂ ಮಾತನಾಡಿ ಬುದ್ದಿವಾದ ಹೇಳಿದ್ದರು. ಈ ವೇಳೆ ಆರೋಪಿ ವೆಂಕಟೇಶ್‌ ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಹೇಳಿದ್ದ. ಆದರೆ, ಇತ್ತೀಚೆಗೆ ಮತ್ತೆ ಮದ್ಯ ಸೇವಿಸಲು ಆರಂಭಿಸಿದ್ದ. ಶನಿವಾರ ಬೆಳಗ್ಗೆ ಸಹ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ನೇತ್ರಾವತಿ ಮೇಲೆ ಹಲ್ಲೆ ಮಾಡಿದ್ದ.

ಸೀರೆ ಕುತ್ತಿಗೆಗೆ ಬಿಗಿದು ಕೊಲೆ:

ರಾತ್ರಿ ಮತ್ತೆ ಕಂಠಮಟ್ಟ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ವೆಂಕಟೇಶ್‌ಗೆ ತಿಳಿ ಹೇಳಿದ್ದರು. ಬಳಿಕ ನೇತ್ರಾವತಿ ಪುತ್ರನನ್ನು ಕರೆದುಕೊಂಡು ಕೋಣೆಯಲ್ಲಿ ಮಲಗಿದ್ದಾರೆ. ರಾತ್ರಿ 12 ಗಂಟೆಗೆ ಕೋಣೆಗೆ ತೆರಳಿರುವ ವೆಂಕಟೇಶ್‌, ತಾಯಿ ಜತೆ ಮಲಗಿದ್ದ ಮಗನನ್ನು ಬೇರೆಡೆಗೆ ಮಲಗಿಸಿದ್ದಾನೆ. ಬಳಿಕ ಸೀರೆ ತೆಗೆದು ನಿದ್ದೆಯಲ್ಲಿದ್ದ ಪತ್ನಿ ನೇತ್ರಾವತಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮದ್ಯದ ನಶೆಯಲ್ಲಿದ್ದ ಆರೋಪಿಯು ಮುಂಜಾನೆವರೆಗೂ ಮೃತದೇಹದ ಪಕ್ಕದಲ್ಲೇ ಮಲಗಿದ್ದಾನೆ. ಬಳಿಕ ಎದ್ದು ಹೋಗಿದ್ದಾನೆ. ಬೆಳಗ್ಗೆ 7 ಗಂಟೆಗೆ ಎಚ್ಚರಗೊಂಡಿರುವ ಪುತ್ರ ತಾಯಿ ನೇತ್ರಾವತಿಯನ್ನು ಎಚ್ಚರಗೊಳಿಸಲು ಮುಂದಾಗಿದ್ದಾನೆ. ಆದರೆ, ತಾಯಿ ಎಚ್ಚರಗೊಂಡಿಲ್ಲ. ಈ ವೇಳೆ ಪುತ್ರ ಜೋರಾಗಿ ಅಳಲು ಆರಂಭಿಸಿದ್ದಾನೆ. 

ಸಂಬಂಧಿಕರಿಂದ  ಪೊಲೀಸ್‌ಗೆ ಮಾಹಿತಿ

ಪುತ್ರನ ಅಳು ಕೇಳಿಸಿಕೊಂಡು ನೆರೆಹೊರೆಯವರು ಮನೆಗೆ ಬಂದು ನೋಡಿದಾಗ ನೇತ್ರಾವತಿ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸಂಬಂಧಿಕರು ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ.

ಬಳಿಕ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.