ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 4 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.

 ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 4 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ 4 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 29 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 23.75 ಕೋಟಿ ರು. ಮೌಲ್ಯದ ಅಸಮತೋಲಿತ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 4 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?

1.ಪುರುಷೋತ್ತಮ ದಾಸ್‌ ಹೆಗಡೆ (ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಕೆ-ಶಿಪ್‌, ಬೆಂಗಳೂರು ನಗರ):

14 ಕಡೆ ದಾಳಿ, 1 ನಿವೇಶನ, 2 ವಾಸದ ಮನೆ, 2 ಶಿಕ್ಷಣ ಸಂಸ್ಥೆಗಳು, 11.30 ಎಕರೆ ಕೃಷಿ ಜಮೀನು, 44.23 ಲಕ್ಷ ರು. ನಗದು, 60.79 ಲಕ್ಷ ರು. ಮೌಲ್ಯದ ಚಿನ್ನಾಭರಣ, 27 ಲಕ್ಷ ರು. ನಿಶ್ಚಿತ ಠೇವಣಿ ಸೇರಿ ಒಟ್ಟು 12.84 ಕೋಟಿ ರು. ಮೌಲ್ಯದ ಆಸ್ತಿ.

2. ಎಚ್‌.ಎಂ.ಜನಾರ್ದನ್‌ (ಅಧೀಕ್ಷಕ ಅಭಿಯಂತರ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು):

6 ಕಡೆ ದಾಳಿ, 1 ನಿವೇಶನ, 3 ವಾಸದ ಮನೆ, 34 ಎಕರೆ ಕೃಷಿ ಜಮೀನು, 1.70 ಕೋಟಿ ರು. ನಗದು, 7.08 ಲಕ್ಷ ರು. ಮೌಲ್ಯದ ಚಿನ್ನ, 20 ಲಕ್ಷ ರು. ಮೌಲ್ಯದ ವಾಹನಗಳು, 60 ಲಕ್ಷ ರು. ಮೌಲ್ಯದ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 4.42 ಕೋಟಿ ರು. ಮೌಲ್ಯದ ಆಸ್ತಿ.

3. ಆರ್‌.ಎಚ್‌.ಅರ್ಜುನ್‌ (ಎಇಇ(ಸಿವಿಲ್‌) ಬೆಸ್ಕಾಂ, ದಾವಣಗೆರೆ ):

5 ಕಡೆ ದಾಳಿ, 2 ನಿವೇಶನ, 3 ವಾಸದ ಮನೆ, 2.20 ಎಕರೆ ಕೃಷಿ ಜಮೀನು, 800 ರು. ನಗದು, 2.17 ಲಕ್ಷ ರು. ಮೌಲ್ಯದ ಚಿನ್ನ, 16.20 ಲಕ್ಷ ರು. ಮೌಲ್ಯದ ವಾಹನಗಳು, 13 ಲಕ್ಷ ರು. ಮೌಲ್ಯದ ಬೆಲೆ ಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 2.18 ಕೋಟಿ ರು. ಮೌಲ್ಯದ ಆಸ್ತಿ.

4.ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್‌ (ಸರ್ವೆ ಸೂಪರ್‌ವೈಸರ್‌, ಎಡಿಎಲ್‌ಆರ್‌ ಕಚೇರಿ, ಧಾರವಾಡ):

4 ಕಡೆ ದಾಳಿ, 3 ನಿವೇಶನ, 1 ವಾಸದ ಮನೆ, 3 ಎಕರೆ ಕೃಷಿ ಜಮೀನು, 82 ಸಾವಿರ ರು. ನಗದು, 35.41 ಲಕ್ಷ ರು. ಮೌಲ್ಯದ ಚಿನ್ನ, 14.90 ಲಕ್ಷ ರು. ಮೌಲ್ಯದ ವಾಹನಗಳು, 50 ಲಕ್ಷ ರು. ಮೌಲ್ಯದ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು 1.82 ಕೋಟಿ ರು. ಮೌಲ್ಯದ ಆಸ್ತಿ.

ಯಾವುದು ಎಷ್ಟೆಷ್ಟು ಪತ್ತೆ?

ಒಟ್ಟು ಸ್ಥಿರಾಸ್ತಿಗಳು 18.99 ಕೋಟಿ ರು.

ಒಟ್ಟು ಚರಾಸ್ತಿಗಳು 4.76 ಕೋಟಿ ರು.

ಗೆಳೆಯನ ಮನೆಯಲ್ಲಿ 1.70 ಕೋಟಿ ರು. ನಗದು ಪತ್ತೆ !

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಅಭಿಯಂತರ ಎಚ್.ಎಂ.ಜನಾರ್ದನ್‌ಗೆ ಸೇರಿ ಆರು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎಚ್‌.ಎಂ.ಜನಾರ್ದನ್‌ ಅವರ ಸ್ನೇಹಿತ ಸುಜಯ್‌ ಶೆಟ್ಟಿ ಅವರ ಫ್ಲ್ಯಾಟ್‌ನ ಶೋಧ ಕಾರ್ಯದ ವೇಳೆ ಬರೋಬ್ಬರಿ 1.70 ಕೋಟಿ ರು. ನಗದು ಪತ್ತೆಯಾಗಿದೆ. ಬಳಿಕ ಲೋಕಾಯುಕ್ತ ಪೊಲೀಸರು ಹಣ ಎಣಿಸುವ ಯಂತ್ರ ತಂದು ಆ ಹಣವನ್ನು ಎಣಿಸಿ ಜಪ್ತಿ ಮಾಡಿದ್ದಾರೆ.