ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ₹3.46 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಹಾವೇರಿ: ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ₹3.46 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಇಲ್ಲಿಯ ಬಸವೇಶ್ವರ ನಗರದಲ್ಲಿ ಇರುವ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಅವರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾನಗಲ್ಲ ತಾಲೂಕು ಅಕ್ಕಿವಳ್ಳಿ ಗ್ರಾಮದ ಶೇಖಪ್ಪ ಹಾವೇರಿ ಡಿಯುಡಿಸಿಯಲ್ಲಿ ಇಇ ಆಗಿದ್ದು, ಇವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಒಟ್ಟು 17 ನಿವೇಶನಗಳು, 1 ವಾಣಿಜ್ಯ ಕಟ್ಟಡ, 2 ವಸತಿ ಕಟ್ಟಡ ಹಾಗೂ ಸಂಬಂಧಿಕರ ಹೆಸರಲ್ಲೂ ಅಕ್ರಮ ಆಸ್ತಿ ಇರುವುದನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಒಟ್ಟು 3,46,68,587 ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಸಿಕ್ಕಿದ್ದು, ಇದು ಶೇಖಪ್ಪ ಅವರ ವಾಸ್ತವ ಆದಾಯಕ್ಕಿಂತ ಶೇ.207ರಷ್ಟು ಹೆಚ್ಚುವರಿ ಸಂಪತ್ತು ಎಂದು ಲೋಕಾಯುಕ್ತ ಅಧಿಕಾರಿಗಳು ಅಂದಾಜಿಸಿದ್ದಾರೆ.ಹುಬ್ಬಳ್ಳಿ ಅಕ್ಷಯ ಪಾರ್ಕ್‌ನಲ್ಲಿ 3 ಗುಂಟೆ 8 ಅಣೆ ವಿಸ್ತೀರ್ಣದ ವಾಣಿಜ್ಯ ಮಳಿಗೆ, ಹುಬ್ಬಳ್ಳಿ ಬೈರಿದೇವರಕೊಪ್ಪ ಗ್ರಾಮದಲ್ಲಿ 2 ಅಂತಸ್ತಿನ ಆರ್‌ಸಿಸಿ ಮನೆ, ದಾವಣಗೆರೆಯಲ್ಲಿ ಮತ್ತೊಂದು ಆರ್‌ಸಿಸಿ ಮನೆ ಇರುವುದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ. ಅಲ್ಲದೇ ಮನೆಯಲ್ಲಿ ಸುಮಾರು ₹10 ಲಕ್ಷ ನಗದು ಹಾಗೂ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿವೆ.

ಇನ್ನು ಲೋಕಾಯುಕ್ತ ದಾಳಿ ವೇಳೆ ಇಇ ಶೇಖಪ್ಪ ಕಳ್ಳಾಟ ಬಯಲಾಗಿದ್ದು, ಹೆದ್ದಾರಿ ಟೋಲ್ ಗೇಟ್‌ಗಳಿಗೂ ವಂಚಿಸುತ್ತಿದ್ದುದು ಬೆಳಕಿಗೆ ಬಂದಿದೆ. ತನ್ನ ಹೆಂಡತಿ, ಮಕ್ಕಳು ಬಳಸುತ್ತಿದ್ದ ಕಾರಿಗೂ ಸರ್ಕಾರದ ನೇಮ್ ಪ್ಲೇಟ್ ಅಳವಡಿಸಿಕೊಂಡಿರುವುದು ಪತ್ತೆಯಾಗಿದೆ. 2 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೀತಿಯಲ್ಲಿ ತನ್ನ ಸ್ವಂತ ವಾಹನಗಳಿಗೆ ನಾಮಫಲಕ ಅಳವಡಿಸಿಕೊಂಡಿದ್ದು, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಯ ನಾಮಫಲಕ ದುರ್ಬಳಕೆ ಮಾಡಿ, ಟೋಲ್ ಗೇಟ್‌ಗಳಿಗೆ ಶುಲ್ಕ ಪಾವತಿಸದೇ ಸಂಚಾರ ನಡೆಸಲು ಈ ರೀತಿ ಪ್ಲ್ಯಾನ್ ಮಾಡಿದ್ದರು ಎಂದು ತಿಳಿದು ಸ್ವತಃ ಲೋಕಾಯುಕ್ತ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾವಣೆ ಆಗಿ ಕೆಲವು ವರ್ಷಗಳೇ ಕಳೆದಿದ್ದರೂ ಸಹ ಚಿಕ್ಕಮಗಳೂರು ಜಿಲ್ಲೆಯ ಕರ್ತವ್ಯದ ಹೆಸರಲ್ಲಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದುದು ಬೆಳಕಿಗೆ ಬಂದಿದೆ. ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಹಾನಗಲ್ ಸೇರಿದಂತೆ ವಿವಿಧೆಡೆ ನಿವೇಶನ, ಬೇನಾಮಿ ಹೆಸರಲ್ಲಿ ಅನೇಕ ವಾಹನಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.