ಎಂಜಿನಿಯರ್‌ ಚೇತನ್ ಮಲಜಿ ಮನೆ ಮೇಲೆ ಲೋಕಾಯುಕ್ತ ದಾಳಿ

| Published : Oct 15 2025, 02:08 AM IST

ಸಾರಾಂಶ

ಆಲಮಟ್ಟಿ ಬಲದಂಡೆ ಕಾಲುವೆ ಉಪವಿಭಾಗ ಸಂಖ್ಯೆ-2ರ ಕಿರಿಯ ಅಭಿಯಂತರ ಚೇತನ್ ಮಲಜಿ ಅವರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಲಮಟ್ಟಿ ಬಲದಂಡೆ ಕಾಲುವೆ ಉಪವಿಭಾಗ ಸಂಖ್ಯೆ-2ರ ಕಿರಿಯ ಅಭಿಯಂತರ ಚೇತನ್ ಮಲಜಿ ಅವರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 16ರಲ್ಲಿ ಚೇತನ್ ಅವರು ಮನೆ ಬಾಗಿಲು ತಟ್ಟಿದ ಲೋಕಾ ಅಧಿಕಾರಿಗಳು ಕೆಲ ಗಂಟೆಗಳ ಕಾಲ ಮನೆಯನ್ನು ಶೋಧಿಸಿದರು. ಜೊತೆಗೆ ಕಮತಗಿ ಪಟ್ಟಣದಲ್ಲಿರುವ ಕಚೇರಿ ಮೇಲೂ ಲೋಕಾ ಅಧಿಕಾರಿಗಳ ಮತ್ತೊಂದು ತಂಡ ಶೋಧ ಕಾರ್ಯ ನಡೆಸಿದೆ. ಮನೆ ಮೇಲೆ ದಾಳಿ ಮಾಡಿದ ವೇಳೆ ಅಧಿಕಾರಿ ಮನೆಯಲ್ಲಿಯೇ ಇದ್ದರು.

ದಾಳಿ ವೇಳೆ ಮನೆಯಲ್ಲಿ 272 ಗ್ರಾಂ ಚಿನ್ನ, 834 ಗ್ರಾಂ ಬೆಳ್ಳಿ ಆಭರಣಗಳು ಸೇರಿ ₹24,81,360 ಮೌಲ್ಯದ ಆಭರಣಗಳು ಪತ್ತೆ ಆಗಿವೆ. ಮೂರು ಕಾರುಗಳು, ಮೂರು ಬೈಕ್‌ ಗಳು, ನಾಲ್ಕು ಖಾಲಿ ನಿವೇಶನಗಳು ಹಾಗೂ ನವನಗರದಲ್ಲಿ ಎರಡು ಅಂತಸ್ತಿನ ಮನೆ ಮತ್ತು ವಿಜಯಪುರದಲ್ಲಿ ಒಂದು ಮನೆ ಇದ್ದು, ಇವುಗಳ ಒಟ್ಟು ಮೌಲ್ಯ ₹1,01,28,774ಕ್ಕೂ ಅಧಿಕ ಅಕ್ರಮ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಲ್ಲೇಶ್ ಟಿ. ಅವರ ಮಾರ್ಗದರ್ಶನದಲ್ಲಿ ಓರ್ವ ಡಿಎಸ್ಪಿ ನಾಲ್ಕು ಜನ ಪೊಲೀಸ್ ನಿರೀಕ್ಷರು ಹಾಗೂ ಬಾಗಲಕೋಟೆ, ವಿಜಯಪುರ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತ ಎಸ್ಪಿ ಮಲ್ಲೇಶ್ ಟಿ. ತಿಳಿಸಿದ್ದಾರೆ.