ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಇಂಡುವಾಳು ಗ್ರಾಪಂನಲ್ಲಿ ಅಕ್ರಮ ಇ-ಸ್ವತ್ತು ವಿತರಣೆ ಹಾಗೂ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಡಿಒ ಹಾಗೂ ಒಬ್ಬ ಪಂಚಾಯ್ತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕಿಯೊಬ್ಬರನ್ನು ಅಮಾನತುಗಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಆದೇಶ ಹೊರಡಿಸಿದ್ದಾರೆ.ಇಂಡುವಾಳು ಗ್ರಾಪಂ ಹಿಂದಿನ ಪಿಡಿಒ ಎ.ಎಸ್.ಸಿದ್ದರಾಜು, ಹಿಂದಿನ ಪ್ರಭಾರಿ ಪಿಡಿಒ ಆಗಿದ್ದ ದಯಾನಂದ, ಗ್ರೇಡ್-೧ ಕಾರ್ಯದರ್ಶಿ ಎಸ್.ಮರಿಲಿಂಗಯ್ಯ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಎಚ್.ಆರ್.ರಾಣಿ ಅಮಾನತುಗೊಂಡವರು.
ಕಳೆದ ವರ್ಷ ಮೇ ೨೬ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂಡುವಾಳು ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿದ್ದ ಸಮಯದಲ್ಲಿ ಗಮನಿಸಿದ ನ್ಯೂನತೆಗಳ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕರ್ತವ್ಯನಿರ್ವಹಿಸಿರುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.ನಂತರದಲ್ಲಿ ತನಿಖೆ ನಡೆಸಿದ ತಂಡ ನೀಡಿದ ವರದಿಯಲ್ಲಿ ೧ ಏಪ್ರಿಲ್ ೨೦೨೧ರಿಂದ ೨೫ ಮೇ೨೦೨೫ರವರೆಗೆ ಇಂಡುವಾಳು ಗ್ರಾಪಂನಲ್ಲಿ ವಿರಿಸಿರುವ ಒಟ್ಟು ೧೯೨೯ ಇ-ಸ್ವತ್ತು ಕಡತಗಳಲ್ಲಿ ೮೫ ಕಡತಗಳು ಮಾತ್ರ ಕ್ರಮಬದ್ಧವಾಗಿದ್ದು, ಉಳಿದ ೧೮೪೪ ಇ-ಸ್ವತ್ತು ಕಡತಗಳು ಕ್ರಮಬದ್ಧವಾಗಿಲ್ಲದಿರುವುದು ಕಂಡುಬಂದಿತ್ತು.
ಈ ವರದಿಯನ್ವಯ ಜಿಪಂ ಸಿಇಒ ಕೆ.ಆರ್.ನಂದಿನಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳು, ನೌಕರರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ ೧೦(೧)ರಡಿ ಮತ್ತು ೧೦(೮)(೨)(ಎ)ರಲ್ಲಿ ನೀಡಿರುವ ಪ್ರದತ್ತವಾದ ಅಧಿಕಾರ ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ನೌಕರರು ಅಮಾನತ್ತಿನಲ್ಲಿರುವಾಗ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ೧೯೫೮ರ ನಿಯಮ ೯೮ರ ಅನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಇವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲವೆಂದು ಸೂಚಿಸಿದ್ದಾರೆ.