ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯ್ತಿಗೆ ಪ್ರಭಾರಿಯಾಗಿ ಬಂದ ಪಿಡಿಓವೊಬ್ಬರು ಕೇವಲ ಮೂರೇ ದಿನದಲ್ಲಿ ೫೪ ಲಕ್ಷ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ಮಂದಿ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಪ್ರಭಾರ ಪಿಡಿಒ ಶ್ರೀನಿವಾಸಯ್ಯ, ಹಾಲಿ ಪಿಡಿಒ ಎಚ್.ಎಸ್. ಲಕ್ಷ್ಮೀ, ಕಾರ್ಯದರ್ಶಿ ಶಿವರುದ್ರ, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್, ಬಿಲ್‌ಕಲೆಕ್ಟರ್, ತಾಂತ್ರಿಕ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಿರಿಯ ಎಂಜಿನಿಯರ್, ತಾಪಂ ಇಒ, ಕಚೇರಿಯ ಪ್ರಭಾರ ವ್ಯವಸ್ಥಾಪಕಿ ಶೋಭಾ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮಲ್ಲೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವೇನು?ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಎಚ್.ಎಸ್.ಲಕ್ಷ್ಮೀ ಅವರು ೧೬ ದಿನ ರಜೆಯ ಮೇಲೆ ತೆರಳಿದ್ದರು. ಈ ಸಮಯದಲ್ಲಿ ಮಂಡ್ಯ ತಾಲೂಕು ಆಲಕೆರೆ ಗ್ರಾಪಂ ಪಿಡಿಒ ಶ್ರೀನಿವಾಸಯ್ಯ ಅವರನ್ನು ತಗ್ಗಹಳ್ಳಿ ಪಿಡಿಒ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಹತ್ತು ದಿನದಲ್ಲಿ ಮೂರು ದಿನ ಸರ್ಕಾರಿ ರಜೆ ಇದ್ದು, ಕೆಲಸ ನಿರ್ವಹಿಸಿರುವುದು ಏಳು ದಿನ ಮಾತ್ರ. ಈ ಏಳು ದಿನದ ಅವಧಿಯಲ್ಲಿ ಜ.೨೯, ೩೦, ೩೧ರ ಮೂರು ದಿನಗಳಲ್ಲೇ ೫೪ ಲಕ್ಷ ರು. ಹಣವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್ ಲೈಟ್‌ಗಳು, ಪೈಪ್‌ಗಳು ಹಾಗೂ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್‌ಗಳಿಲ್ಲದಿದ್ದರೂ ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಹಣ ಪಾವತಿಸಿರುವುದು ಕಂಡುಬಂದಿತ್ತು.
ಮೂರೇ ದಿನದಲ್ಲಿ ೪೮ ಲಕ್ಷ ರು. ಹಣವನ್ನು ಆನ್‌ಲೈನ್ ಪಾವತಿ, ೪ ಲಕ್ಷ ರು. ಹಣವನ್ನು ಚೆಕ್ ಹಾಗೂ ತಗ್ಗಹಳ್ಳಿ ಗ್ರಾಮೀಣ ಬ್ಯಾಂಕ್‌ಗೆ ಒಂದೂವರೆ ಲಕ್ಷ ರು. ಹಣವನ್ನು ಪಾವತಿಸಲಾಗಿತ್ತು. ಊರಿನ ಗ್ರಾಮಸ್ಥರಿಗೆ ಈ ವಿಷಯ ತಿಳಿದು ತಕ್ಷಣವೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಅವರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯೋನ್ಮುಖರಾದ ಅಧಿಕಾರಿಗಳು ತಗ್ಗಹಳ್ಳಿ ಗ್ರಾಪಂಗೆ ತೆರಳಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಿ ೯ ಲಕ್ಷ ರು. ಹಣ ಆನ್‌ಲೈನ್ ಮೂಲಕ ಪಾವತಿಯಾಗಿದ್ದು, ಉಳಿದ ಹಣಪಾವತಿಯಾಗುವಷ್ಟರಲ್ಲಿ ಖಾತೆಯನ್ನು ಬಂದ್ ಮಾಡಿಸಿ ಅಕ್ರಮ ಹಣ ಪಾವತಿಗೆ ಬ್ರೇಕ್ ಹಾಕಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
೧೫ನೇ ಹಣಕಾಸು ಯೋಜನೆಯ ವಹಿವಾಟು, ಪ್ರತಿ ಸಿಬ್ಬಂದಿ ವೇತನದ ಮಾಹಿತಿ, ಒಂದು ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ವಿವರಗಳೊಂದಿಗೆ ಯುಪಿಐ ವ್ಯವಹಾರದ ಸ್ಟೇಟ್‌ಮೆಂಟ್ ಹೋಲಿಕೆ ಮಾಡಿ ವ್ಯತ್ಯಾಸ ಕಂಡುಬಂದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆ ಕುರಿತು ಪೂರಕ ದಾಖಲಾತಿಗಳೊಂದಿಗೆ ವರದಿ ನೀಡಬೇಕು ಎಂದು ಮಂಡ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶಮೂರ್ತಿ ಅವರಿಗೆ ಆದೇಶಿಸಿದ್ದಾರೆ.ಒಂದೇ ದಿನದಲ್ಲಿ ಡಾಂಗಲ್ ನೀಡಲು ಕಾರಣರ್‍ಯಾರು?ಕಳೆದ ೨ ವರ್ಷಗಳಿಂದ ೧೫ನೇ ಹಣಕಾಸು ಯೋಜನೆಯಡಿ ಸ್ವೀಕೃತವಾಗಿರುವ ಒಟ್ಟು ಅನುದಾನ ಮತ್ತು ಕಾಮಗಾರಿಗಳ ಮಾಹಿತಿ, ಪ್ರಭಾರ ಪಿಡಿಒ ಶ್ರೀನಿವಾಸಯ್ಯ ಅವರಿಗೆ ಒಂದೇ ದಿನದಲ್ಲಿ ಡಿಎಸ್‌ಸಿ ಡಾಂಗಲ್ ನೀಡಲು ಕಾರಣಕರ್ತರು ಯಾರು ಎಂಬುದಕ್ಕೆ ಪೂರಕ ದಾಖಲೆ ಒದಗಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.
೧೫ನೇ ಹಣಕಾಸು ಯೋಜನೆಯ ಪಾಸ್‌ಬುಕ್, ಡಿಸಿ ಬಿಲ್ ರಿಜಿಸ್ಟರ್, ಪ್ರಮಾಣೀಕರಿಸಿದ ಪ್ರತಿಗಳು ಹಾಗೂ ಮೂಲ ದಾಖಲೆಗಳು, ಸಾಮಗ್ರಿಗಳ ಖರೀದಿಗೆ ಯಾರಿಂದ ಬೇಡಿಕೆ ಬಂದಿತ್ತು. ಖರೀದಿಗೂ ಮುನ್ನ ಪ್ರಕಟಣೆ ಹೊರಡಿಸಲಾಗಿದೆಯೇ, ತುಲನಾತ್ಮಕ ಪಟ್ಟಿ ಮಾಡಲಾಗಿದೆಯೇ, ವರ್ಕ್ ಆರ್ಡರ್ ನೀಡಲಾಗಿದೆಯೇ, ಸಾಮಗ್ರಿ ಸರಬರಾಜು ಆಗಿದೆಯೇ ಎಂಬುದರ ಬಗ್ಗೆ ಗ್ರಾ.ಪಂ. ಕಚೇರಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪೂರಕ ದಾಖಲೆಗಳ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.ಗ್ರಾಪಂ ಹಣ ದುರುಪಯೋಗದ ಬಗ್ಗೆ ಪಾಲನಾ ವರದಿಯನ್ನು ಪೂರಕ ದಾಖಲಾತಿಯೊಂದಿಗೆ ೨೦೨೬ರ ಮಾರ್ಚ್ ೩೦ರೊಳಗೆ ಖುದ್ದು ಹಾಜರಾಗಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.