ಸಾರಾಂಶ
ಬೆಂಗಳೂರು: ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಜತೆ ಸೇರಿ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ತಾಯಿಯೊಬ್ಬಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಉಪಕಾರ್‌ಪೇಟೆ ನಿವಾಸಿ ರೋಜಾ ಬಂಧಿತಳಾಗಿದ್ದು, ಆರೋಪಿಯಿಂದ ₹5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವಿಶ್ವೇಶ್ವರಯ್ಯ ಲೇಔಟ್ 8ನೇ ಹಂತದಲ್ಲಿ ವಿಳಾಸ ಕೇಳುವ ನೆಪದಲ್ಲಿ ನಿರ್ಮಲಾ ಎಂಬುವರಿಂದ ಕಿಡಿಗೇಡಿಗಳು ₹3 ಲಕ್ಷ ಮೌಲ್ಯದ ಮಾಂಗಲ್ಯ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ತಾಯಿ ಹಾಗೂ ಆಕೆಯ ಅಪ್ರಾಪ್ತ ಮಗನನ್ನು ಬಂಧಿಸಿದ್ದಾರೆ.
ಮಕ್ಕಳ ಮೂಲಕ ಕೃತ್ಯ: ಕ್ರಿಮಿನಲ್ ಹಿನ್ನೆಲೆ ಹೊಂದಿರುವ ರೋಜಾ ತನ್ನ ಮಕ್ಕಳ ಮೂಲಕ ಅಪರಾಧ ಕೃತ್ಯ ಎಸಗಿ ಆಕೆ ಹಣ ಸಂಪಾದಿಸುತ್ತಿದ್ದಳು. ಮೊದಲು ಉಲ್ಲಾಳ ಸಮೀಪ ನೆಲೆಸಿದ್ದ ಆಕೆ, ಪೊಲೀಸರ ಭಯದಿಂದ ಇತ್ತೀಚೆಗೆ ತನ್ನ ವಾಸ್ತವ್ಯವನ್ನು ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಿದ್ದಳು. ತನ್ನ ಪತಿ ನಿಧನನಾದ ಬಳಿಕ ಮಕ್ಕಳ ಜತೆ ಅಪರಾಧ ಚಟುವಟಿಕೆ ಮುಂದುವರೆಸಿದ್ದಳು.
2019ರಿಂದ ಅಪರಾಧ ಕೃತ್ಯಗಳಲ್ಲಿ ಆರೋಪಿ ರೋಜಾಳ 17 ವರ್ಷದ ಇಬ್ಬರು ಗಂಡು ಮಕ್ಕಳು ತೊಡಗಿದ್ದು, ಈ ಅಪ್ರಾಪ್ತರ ಮೇಲೆ ಮಾದನಾಯಕನಹಳ್ಳಿ, ತಾವರೆಕೆರೆ, ಕುಂಬಳಗೋಡು ಹಾಗೂ ಬ್ಯಾಡರಹಳ್ಳಿ ಠಾಣೆಗಳಲ್ಲಿ ಡಕಾಯಿತಿ, ಸರ ಅಪಹರಣ ಹಾಗೂ ಸುಲಿಗೆ ಸೇರಿ 12ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ರೋಜಾಳ ಮಕ್ಕಳು ಸರಗಳ್ಳತನ ಕೃತ್ಯ ಎಸಗುತ್ತಿದ್ದರು. ಹೀಗೆ ಸಂಪಾದಿಸಿದ ಚಿನ್ನಾಭರಣಗಳನ್ನು ರೋಜಾ ವಿಲೇವಾರಿ ಮಾಡುತ್ತಿದ್ದಳು. ಆದರೆ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿನ ಕೃತ್ಯಕ್ಕೆ ಆಕೆಯ ಕುಮ್ಮಕ್ಕು ನೀಡಿದ್ದಳು. ಆ ಲೇಔಟ್‌ನಲ್ಲಿ ಜನ ಸಂಚಾರ ವಿರಳ ಎಂದು ಹೇಳಿ ಸರಗಳ್ಳತನಕ್ಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮೈಸೂರಿನಲ್ಲಿ ಕಳುವು ಮಾಡಿದ್ದ ಬೈಕ್‌ನ್ನೇ ಸರಗಳ್ಳತನ ಕೃತ್ಯಕ್ಕೆ ಅಪ್ರಾಪ್ತರು ಬಳಸಿದ್ದಾರೆ. ಈ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಮಕ್ಕಳ ಪೈಕಿ ಒಬ್ಬಾತ ಸಿಕ್ಕಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬನಿಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರ ಮೇಲೆ ಮಚ್ಚು ಬೀಸಿದರು!
ಸರ ಅಪಹರಣ ಕೃತ್ಯ ಎಸಗಿ ಪರಾರಿಯಾಗುವಾಗ ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಈ ಅಪ್ರಾಪ್ತರು ಮಚ್ಚು ಬೀಸಿ ಕೊಲೆ ಯತ್ನಿಸಿದ್ದರು. ಆದರೆ ಅದೃಷ್ಟವಾಶಾತ್ ಪೊಲೀಸರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದೇ ರೀತಿ ಹಲವು ಬಾರಿ ಸಹ ತಮ್ಮನ್ನು ಬಂಧಿಸಲು ಬರುವ ಪೊಲೀಸರ ಮೇಲೆ ರೋಜಾ ಮಕ್ಕಳು ದುಂಡಾವರ್ತನೆ ತೋರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.