ಪೊಲೀಸ್‌ ಆಯುಕ್ತರ 2 ಕಾರಿಗೂ ಡ್ಯಾಶ್ ಕ್ಯಾಮೆರಾ ಅಳವಡಿಕೆ

| Published : Apr 06 2024, 06:51 AM IST

Dayanand B

ಸಾರಾಂಶ

ಪೊಲೀಸ್ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಣಿಸುವ ನಿಟ್ಟಿನಲ್ಲಿ ತಮ್ಮ ಎರಡು ಸರ್ಕಾರಿ ಕಾರುಗಳಿಗೆ ಕೂಡಾ ಡ್ಯಾಶ್ ಕ್ಯಾಮೆರಾಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಳ‍ವಡಿಸಿದ್ದಾರೆ.

ಬೆಂಗಳೂರು :  ಪೊಲೀಸ್ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಣಿಸುವ ನಿಟ್ಟಿನಲ್ಲಿ ತಮ್ಮ ಎರಡು ಸರ್ಕಾರಿ ಕಾರುಗಳಿಗೆ ಕೂಡಾ ಡ್ಯಾಶ್ ಕ್ಯಾಮೆರಾಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಳ‍ವಡಿಸಿದ್ದಾರೆ.

ಈಗಾಗಲೇ ಗಸ್ತು ತಿರುಗಾಟದ ಹೊಯ್ಸಳ ವಾಹನಗಳು, ಸಹಾಯಕ ಆಯುಕ್ತ (ಎಸಿಪಿ) ಹಾಗೂ ಇನ್‌ಸ್ಪೆಕ್ಟರ್‌ಗಳ ಜೀಪ್‌ಗಳಿಗೆ ಡ್ಯಾಶ್ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ನಗರದ 241 ಹೊಯ್ಸಳ ವಾಹನಗಳಿಗೆ ಸೇಫ್ ಸಿಟಿ ಯೋಜನೆಯಡಿ ಹಾಗೂ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ ಜೀಪುಗಳಿಗೆ ರಾಜ್ಯದ ಅನುದಾನದಲ್ಲಿ ಡ್ಯಾಶ್ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದರು.

ಪಾರದರ್ಶಕತೆ ಹಾಗೂ ಉತ್ತರಾದಾಯಿತ್ವಕ್ಕೆ ಪೊಲೀಸ್ ವಾಹನಗಳಲ್ಲಿ ಡ್ಯಾಶ್ ಕ್ಯಾಮೆರಾಗಳನ್ನು ಹಾಕಲಾಗುತ್ತಿದೆ. ಆ ವಾಹನಗಳ ಒಳಗಡೆ ಮುಂದೆ ಮತ್ತು ಹಿಂದೆ ಕ್ಯಾಮೆರಾಗಳಿರಲಿದ್ದು, ಎಲ್ಲ ಘಟನಾವಳಿಗಳನ್ನು ಅವು ಚಿತ್ರೀಕರಿಸುತ್ತವೆ. ಅಲ್ಲದೆ ಆಯುಕ್ತರ ಕಾರುಗಳಿಗೆ ಸಹ ಕ್ಯಾಮೆರಾ ಹಾಕಲಾಗಿದೆ ಎಂದು ಹೇಳಿದರು.

ಈ ಮೊದಲು ಹೊಯ್ಸಳ ವಾಹನದ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಹಾಗೂ ಇತರೆ ಉಪಕರಣಗಳನ್ನು ನೀಡಲಾಗಿತ್ತು. ಈಗ ಹಂತ ಹಂತವಾಗಿ 500 ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಆಡಳಿತದಲ್ಲಿ ಬದಲಾವಣೆ ತರಬೇಕಾದರೆ ನಮ್ಮಿಂದಲೇ ಶುರುವಾಗಲೇಬೇಕು. ಹಾಗಾಗಿ ಆಯುಕ್ತರ ಕಾರುಗಳಿಗೆ ಸಹ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು