ಸಾರಾಂಶ
ಆನೇಕಲ್ : ಇತಿಹಾಸ ಪ್ರಸಿದ್ಧ ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ಹೀಲಲಿಗೆ ಗ್ರಾಮದಿಂದ ಬರುತ್ತಿದ್ದ ತೇರು ಆಯತಪ್ಪಿ ನೆಲಕ್ಕುರುಳಿದ ಘಟನೆ ವರದಿಯಾಗಿದೆ.
21 ಅಂಕಣ ಹಾಗೂ 121 ಅಡಿ ಎತ್ತರದ ತೇರು ನೆಲಕ್ಕೆ ಬೀಳುತ್ತಿದ್ದಂತೆ ಭಯ ಭೀತರಾದ ಜನ ಚೆಲ್ಲಾ ಪಿಲ್ಲಿಯಾಗಿ ಓಡಿದರು.
ಅದೃಷ್ಟವಶಾತ್ ಯಾರೊಬ್ಬರಿಗೂ ಸಮಸ್ಯೆ ಆಗಿಲ್ಲ. ತೇರು ಎಳೆಯಲು ಕಟ್ಟಿದ್ದ 30 ಜೊತೆ ಎತ್ತುಗಳೂ ಗಾಬರಿಯಿಂದ ಪೇರಿ ಕಿತ್ತವು. ಕುರ್ಜು ನೋಡಲು ಜಮಾಯಿಸಿದ್ದ ತೇರು ಧರೆಗೆ ಉರುಳುತ್ತಿದ್ದಂತೆ ಜನ ಓಡುತ್ತಿದ್ದಾಗ ಕೆಲ ಕ್ಷಣ ಆತಂಕ ಸೃಷ್ಟಿಸಿತ್ತು. ಟ್ರ್ಯಾಕ್ಟರ್, ಜೆಸಿಬಿಯಿಂದ ನಿಯಂತ್ರಿಸಿಸುತ್ತಿದ್ದ ತೇರು ವಾಲುತ್ತಿದ್ದಂತೆ, ಮೊದಲಾಳಿಗಳು ಭಕ್ತಾದಿಗಳನ್ನು ದೂರ ಓಡಲು ಕೂಗಿ ಹೇಳಿದರು.
ಮುಂಜಾಗ್ರತಾ ಕ್ರಮ ವಹಿಸಿದ್ದ ಕಾರಣ ಯಾವುದೇ ರೀತಿಯ ಪ್ರಮಾದ ಸಂಭವಿಸಲಿಲ್ಲ.
ಇತಿಹಾಸ:
ಇತಿಹಾಸ ಪ್ರಸಿದ್ಧ ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ಸುತ್ತಮುತ್ತಲಿನ 10 ಗ್ರಾಮಗಳಿಂದ ಆಯಾ ಗ್ರಾಮ ದೇವತೆಗಳು ಬಂದು ಸೇರುತ್ತವೆ. ಹುಸೂರು ಮದ್ದೂರಮ್ಮ ಜೊತೆಗೆ ಇದ್ದು ಮಡಿಲಕ್ಕಿ ಸ್ವೀಕರಿಸಿ ಜಾತ್ರೆ ಕಳೆದ ನಂತರ ಸ್ವಸ್ಥಾನ ಸೇರುತ್ತವೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಹಾಗೆಯೇ ಟಿಪ್ಪುವಿನ ಸೈನಿಕರು ತಮ್ಮ ಆಡಳಿತ ವಶದಲ್ಲಿದ್ದ ಬೇರಿಕೆ ಗ್ರಾಮ (ಈಗಿನ ತಮಿಳುನಾಡು) ಬಳಿ ಯುದ್ಧ ಮುಗಿಸಿ ಹುಸ್ಕೂರು ಮೂಲಕ ಸಾಗುವಾಗ ಸಮೀಪದ ತೋಪಿನಲ್ಲಿ ಅಡುಗೆ ಮಾಡಿ ಊಟ ಮುಗಿಸಿ ಹೊರಡುವಾಗ ವಾಂತಿ ಅತಿಸಾರವಾಯಿತು. ಮದ್ದೂರಮ್ಮ ದೇವಾಲಯದ ಪೂಜಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ಅವರು ಔಷಧಿ ನೀಡಿ ದೇವಿಗೆ ಹರಕೆ ಹೊತ್ತುಕೊಳ್ಳಿ. ಶೀಘ್ರ ಗುಣಮುಖರಾಗುವಿರಿ ಎಂದರಂತೆ. ಅದೇ ರೀತಿ ನಡೆದು ಕೊಂಡಾಗ ಒಳ್ಳೆಯದಾಗಿ, ಟಿಪ್ಪುವಿನ ಗಮನಕ್ಕೆ ಬಂದು ದೇವಿಗೆ ವಜ್ರಾಭರಣ ಕಾಣಿಕೆ ನೀಡಿದ್ದರು. ಇಂದಿಗೂ ಜಾತ್ರೆ ಮಹೋತ್ಸವ ಸಂದರ್ಭದಲ್ಲಿ ಅದೇ ಒಡವೆಗಳನ್ನು ಬಳಸುತ್ತಾರೆ. ಸರ್ಕಾರಿ ಖಜಾನೆಯಲ್ಲಿ ಭದ್ರವಾಗಿರುವ ಒಡವೆಗಳನ್ನು ವಿಶೇಷ ಸಂದರ್ಭದಲ್ಲಿ ಬಳಸಲಾಗುತ್ತದೆ.