ಸಾಲ ತೀರಿಸಲು ಮನೆ ಮಾಲೀಕಳನ್ನೇ ಕೊಂದರು!

| N/A | Published : Nov 06 2025, 04:15 AM IST / Updated: Nov 06 2025, 07:24 AM IST

Crime news

ಸಾರಾಂಶ

ಟಿವಿ ನೋಡುವ ನೆಪದಲ್ಲಿ ಮನೆಗೆ ತೆರಳಿ ಮನೆ ಮಾಲೀಕಳನ್ನು ಕೊಂದು ಚಿನ್ನದ ಸರ ದೋಚಿದ್ದ ಬಾಡಿಗೆದಾರರ ದಂಪತಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ನಿವಾಸಿಗಳಾದ ಪ್ರಸಾದ್ ಶ್ರೀಶೈಲ ಮಕಾಯ್‌ ಹಾಗೂ ಆತನ ಪತ್ನಿ ಸಾಕ್ಷಿ ಹಣಮಂತ ಹೊದ್ಲೂರು ಬಂಧಿತರು

 ಬೆಂಗಳೂರು :  ಟಿವಿ ನೋಡುವ ನೆಪದಲ್ಲಿ ಮನೆಗೆ ತೆರಳಿ ಮನೆ ಮಾಲೀಕಳನ್ನು ಕೊಂದು ಚಿನ್ನದ ಸರ ದೋಚಿದ್ದ ಬಾಡಿಗೆದಾರರ ದಂಪತಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ನಿವಾಸಿಗಳಾದ ಪ್ರಸಾದ್ ಶ್ರೀಶೈಲ ಮಕಾಯ್‌ ಹಾಗೂ ಆತನ ಪತ್ನಿ ಸಾಕ್ಷಿ ಹಣಮಂತ ಹೊದ್ಲೂರು ಬಂಧಿತರಾಗಿದ್ದು, ಮಂಗಳವಾರ ಮಧ್ಯಾಹ್ನ ಶ್ರೀ ಲಕ್ಷ್ಮೀ (65) ಅವರು ಮನೆಯಲ್ಲಿ ಏಕಾಂಗಿಯಾಗಿದ್ದಾಗ ಈ ಹತ್ಯೆ ನಡೆದಿತ್ತು. ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಹಂತಕ ದಂಪತಿಯನ್ನು ಇನ್ಸ್‌ಪೆಕ್ಟರ್ ರಾಜು ನೇತೃತ್ವದ ತಂಡ ಸೆರೆ ಹಿಡಿದಿದೆ.

ಸಾಲ ತೀರಿಸಲು ಹತ್ಯೆ:

 ನಾಲ್ಕು ತಿಂಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಮಹಾರಾಷ್ಟ್ರದ ಸೋಲಾಪುರ ಮೂಲದ ಪ್ರಸಾದ್ ಹಾಗೂ ಸಾಕ್ಷಿ ದಂಪತಿ, ಉತ್ತರಹಳ್ಳಿಯಲ್ಲಿದ್ದ ಶ್ರೀ ಲಕ್ಷ್ಮೀ ಅವರ ಮನೆಯಲ್ಲಿ ಬಾಡಿಗೆಯಲ್ಲಿ ವಾಸವಾಗಿದ್ದರು. ಪಕ್ಕದ ಮನೆಯ ಪತಿ ಅಶ್ವತ್ಥ್‌ ನಾರಾಯಣ ಜತೆ ಲಕ್ಷ್ಮೀ ನೆಲೆಸಿದ್ದರು. ಮೊದಲ ಮಹಡಿಯಲ್ಲಿ ಫಣಿರಾಜ್‌ ಎಂಬುವರ ಕುಟುಂಬ ವಾಸವಾಗಿದೆ.

ಸೆಂಟ್ರಿಂಗ್ ಕೆಲಸಗಾರ ಪ್ರಸಾದ್ ಹಾಗೂ ಪದ್ಮನಾಭನಗರದ ಚಿನ್ನಾಭರಣ ಅಂಗಡಿಯಲ್ಲಿ ಸಾಕ್ಷಿ ದುಡಿದು ಜೀವನ ಸಾಗಿಸುತ್ತಿದ್ದರು. ಮನೆ ಮಾಲಿಕರ ಜತೆ ವಿಶ್ವಾಸದಿಂದ ದಂಪತಿ ಇದ್ದರು. ಆದರೆ ಇತ್ತೀಚೆಗೆ ವಿಪರೀತ ಸಾಲದ ಸುಳಿಗೆ ಸಿಲುಕಿದ ಅವರು ಮಾಲಿಕರ ಮನೆಯಲ್ಲಿ ಕಳ್ಳತನಕ್ಕೆ ನಿರ್ಧರಿಸಿದ್ದರು.

ಕಾಟನ್‌ಪೇಟೆ ಸಮೀಪ ಅಗರಬತ್ತಿ ಕೈಗಾರಿಕೆಯಲ್ಲಿ ಕೆಲಸದಲ್ಲಿದ್ದ ನಾರಾಯಣ್

ಕಾಟನ್‌ಪೇಟೆ ಸಮೀಪ ಅಗರಬತ್ತಿ ಕೈಗಾರಿಕೆಯಲ್ಲಿ ಕೆಲಸದಲ್ಲಿದ್ದ ನಾರಾಯಣ್ ಅವರು, ಪ್ರತಿ ದಿನ ಬೆಳಗ್ಗೆ ಹೋದರೆ ಸಂಜೆ ಮನೆಗೆ ಮರಳುತ್ತಿದ್ದರು. ಆ ವೇಳೆ ಮನೆಯಲ್ಲಿ ಲಕ್ಷ್ಮೀ ಏಕಾಂಗಿಯಾಗಿರುತ್ತಿದ್ದರು. ಈ ವಿಚಾರ ತಿಳಿದಿದ್ದ ಪ್ರಸಾದ್‌ ದಂಪತಿ, ಮಧ್ಯಾಹ್ನ ಮನೆ ಮಾಲೀಕಳ ಕೊಲೆಗೆ ಸಂಚು ರೂಪಿಸಿದ್ದರು.

ಎಂದಿನಂತೆ ಮಂಗಳವಾರ ಬೆಳಗ್ಗೆ ನಾರಾಯಣ್ ತೆರಳಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತರ ಮನೆಗೆ ಹೋದ ಪ್ರಸಾದ್ ಹಾಗೂ ಸಾಕ್ಷಿ, ತಾವು ಹೊಸ ಟಿವಿ ಖರೀದಿಸಬೇಕು. ನಿಮ್ಮ ಟಿವಿ ನೋಡುತ್ತೇವೆ ಎಂದು ಒಳಕ್ಕೆ ಬಂದಿದ್ದಾರೆ. ಆಗ ಔಪಚಾರಿಕ ಮಾತುಕತೆ ನಡೆಸುತ್ತಲೇ ಶ್ರೀಲಕ್ಷ್ಮೀ ಉಸಿರುಗಟ್ಟಿಸಿ ಹತ್ಯೆಗೈದು ಚಿನ್ನದ ಸರ ದೋಚಿದ್ದರು. ಈ ಹತ್ಯೆ ವೇಳೆ ಪ್ರತಿರೋಧಿಸಿದಾಗ ಮೃತರಿಗೆ ಆರೋಪಿಗಳು ಪರಚಿದ್ದರು. ಇದರಿಂದ ಮೃತದೇಹದಲ್ಲಿ ಕುತ್ತಿಗೆ, ತುಟಿ ಹಾಗೂ ಮುಖದ ಮೇಲೆ ಪರಚಿದ ಗಾಯದ ಗುರುತುಗಳು ಪತ್ತೆಯಾಗಿದ್ದವು.

ಸೆರೆಯಾಗಿದ್ದು ಹೇಗೆ?

ತಮ್ಮ ಪತ್ನಿಗೆ ಮಧ್ಯಾಹ್ನ ನಿರಂತರವಾಗಿ ನಾರಾಯಣ್ ಕರೆ ಮಾಡಿದಾಗ ಪ್ರತಿಕ್ರಿಯಿಸಿಲ್ಲ. ಇದರಿಂದ ಆತಂಕಗೊಂಡ ಅವರು, ತಮ್ಮ ಬಾಡಿಗೆದಾರ ಫಣಿರಾಜ್ ಅವರಿಗೆ ಕರೆ ಮಾಡಿ ಮನೆಗೆ ಹೋಗಿ ಪತ್ನಿಯನ್ನು ವಿಚಾರಿಸುವಂತೆ ತಿಳಿಸಿದ್ದಾರೆ. ಸಂಜೆ ಮೃತರ ಮನೆಗೆ ಫಣಿರಾಜ್‌ ತೆರಳಿದಾಗ ಪ್ರಜ್ಞಾಹೀನರಾಗಿ ಲಕ್ಷ್ಮೀ ಅವರು ಬಿದ್ದಿರುವುದನ್ನು ನೋಡಿ ನಾರಾಯಣ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಮೃತರ ಪತ್ನಿ ಧಾವಿಸಿದ್ದಾರೆ. ನಂತರ ಮೃತರ ಅಕ್ಕ ಸಂಪತ್ ಲಕ್ಷ್ಮೀ ಅವರಿಗೆ ಕರೆ ಮಾಡಿ ನಾರಾಯಣ್ ವಿಷಯ ತಿಳಿಸಿದ್ದಾರೆ. ಆಗ ತಾನು ಮಧ್ಯಾಹ್ನ 1 ಗಂಟೆಗೆ ತಂಗಿ ಲಕ್ಷ್ಮೀಗೆ ಕರೆ ಮಾಡಿದ್ದಾಗ ಟಿವಿ ಪರಿಶೀಲಿಸುತ್ತಿದ್ದಾರೆ. ತಾನು ಹೊರ ಬಂದು ಮಾತನಾಡುತ್ತಿರುವುದಾಗಿ ತಿಳಿಸಿದ್ದಳು ಎಂದಿದ್ದರು.

ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ನಾರಾಯಣ್ ಅವರು, ತಮ್ಮ ಮನೆಗೆ ಯಾರೋ ಪರಿಚಿತರೇ ಬಂದು ಹತ್ಯೆ ಕೃತ್ಯ ಎಸಗಿದ್ದಾರೆ ಎಂದು ಸಂಶಯಪಟ್ಟಿದ್ದರು. ಈ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಅಲ್ಲಿನ ಪರಿಸ್ಥಿತಿ ಅವಲೋಕಿಸಿದಾಗ ಕೃತ್ಯದಲ್ಲಿ ಪರಿಚಿತರ ಪಾತ್ರವಿರುವುದು ಬಲವಾದ ಶಂಕೆ ಮೂಡಿದೆ. ಈ ಸುಳಿವು ಲಭ್ಯವಾದ ಕೂಡಲೇ ಚುರುಕಾದ ಪೊಲೀಸರು, ಅನುಮಾನದ ಮೇರೆಗೆ ನೆಲ ಮಹಡಿಯಲ್ಲಿ ನೆಲೆಸಿರುವ ಪ್ರಸಾದ್ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

ಹತ್ಯೆ ಬಳಿಕ ಮನೆಯಲ್ಲೇ ಇದ್ದ ದಂಪತಿ

ಈ ಹತ್ಯೆ ಬಳಿಕ ಮನೆಯಲ್ಲೇ ಪ್ರಸಾದ್ ಹಾಗೂ ಸಾಕ್ಷಿ ಇದ್ದರು. ತಾವು ಹೊರ ಹೋದರೆ ಅನುಮಾನ ಬರುತ್ತದೆ ಎಂದು ಭಾವಿಸಿದ್ದ ದಂಪತಿ, ತನಿಖೆಗೆ ಪೊಲೀಸರು ಬಂದಾಗಲೂ ಸಹಜವಾಗಿಯೇ ನಡೆದುಕೊಂಡಿದ್ದರು. ಆರಂಭದಲ್ಲಿ ದಂಪತಿ ಮೇಲೆ ಪೊಲೀಸರಿಗೆ ಸಂಶಯ ಬಂದಿರಲಿಲ್ಲ. ಆದರೆ ಸಾಂದರ್ಭಿಕ ಸಾಕ್ಷ್ಯಗಳನ್ನು ವಿಮರ್ಶಿಸಿದಾಗ ಪ್ರಸಾದ್ ಮೇಲೆ ಪೊಲೀಸರ ಅನುಮಾನ ಬಂದು ವಶಕ್ಕೆ ಪಡೆದು ಪ್ರಶ್ನಿಸಿದಾಗ ದಂಪತಿ ಸತ್ಯ ಬಾಯ್ಬಿಟ್ಟಿದ್ದಾರೆ ತಿಳಿದು ಬಂದಿದೆ. ಸಾಲ ತೀರಿಸಲು ಲಕ್ಷ್ಮೀ ಅವರನ್ನು ಹತ್ಯೆ ಮಾಡಿದ್ದಾಗಿ ದಂಪತಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಹೇಳಿವೆ.

Read more Articles on