ಸಾರಾಂಶ
ಮಂಡ್ಯ : ಅರಣ್ಯ ಇಲಾಖೆಯವರು ಜಮೀನು ವಶಪಡಿಸಿಕೊಂಡಿದ್ದಾರೆಂಬ ಕಾರಣಕ್ಕೆ ಬೇಸತ್ತ ರೈತ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮ*ತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದಿದೆ.
ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ದೇವೇಗೌಡರ ಪುತ್ರ ಮಂಜೇಗೌಡ (50) ಆತ್ಮ*ತ್ಯೆಗೆ ಯತ್ನಿಸಿದವರು.
ಗ್ರಾಮದಲ್ಲಿ ತನಗಿರುವ ಜಮೀನನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ವಿರುದ್ಧ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಯತ್ನ
ನಂತರ ಸೋಮವಾರ ಮಂಡ್ಯಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾನೆ. ಆದರೆ, ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತ ಮಂಜೇಗೌಡ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿ ಮೊದಲೇ ತಂದಿದ್ದ ಪೆಟ್ರೋಲ್‌ನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಹೊತ್ತಿ ಉರಿಯುತ್ತಿದ್ದಂತೆ ಬೆಂಕಿಯನ್ನು ಉದ್ಯಾನದ ಪಕ್ಕದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳು ತಕ್ಷಣ ಓಡಿ ಬಂದು ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಆತನ ಮೈಮೇಲೆ ಎರಚಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿ ಆ್ಯಂಬುಲೆನ್ಸ್ ಮೂಲಕ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿದ್ಯುತ್ ಸ್ಪರ್ಶ: ರೈತ ಸಾವು
ಹಲಗೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಹಲಗೂರು ಸಮೀಪದ ಸಾಗ್ಯ ಗ್ರಾಮದ ಲೇಟ್ ಅಂಕಯ್ಯರ ಪುತ್ರ ರಮೇಶ್ (38) ಮೃತ ವ್ಯಕ್ತಿ. ಮಂಗಳವಾರ ಬೆಳಗ್ಗೆ ಎಂದಿನಂತೆ ತಮ್ಮ ಜಮೀನಿಗೆ ತೆರಳಿದ್ದ ರಮೇಶ್, ತೆಂಗಿನ ಮರಗಳಿಂದ ಬಿದ್ದಿದ್ದ ತೆಂಗಿನ ಗರಿಗಳನ್ನು ಜಮೀನಿನಿಂದ ಹೊರ ಹಾಕುವ ಕೆಲಸ ಮಾಡುತ್ತಿದ್ದರು. ಈ ವೇಳೆ 11ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗಳಿಗೆ ಗರಿಗಳು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
)
)
;Resize=(128,128))
;Resize=(128,128))
;Resize=(128,128))