ಸೇಡಿನ ಜಾಡಿನಲ್ಲಿ ಫೋರೆನ್ಸಿಕ್ ಡಿಟೆಕ್ಟಿವ್

| Published : May 10 2024, 11:47 PM IST

ಸಾರಾಂಶ

ರಚನಾ ಇಂದೆರ್‌ ನಟನೆಯ 4ಎನ್‌6 ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ.

ಚಿತ್ರ: 4 ಎನ್ 6

ತಾರಾಗಣ: ರಚನಾ ಇಂದರ್‌, ಭವಾನಿ ಪ್ರಕಾಶ್‌, ನವೀನ್‌ ಕುಮಾರ್‌, ಆದ್ಯಶೇಖರ್‌

ನಿರ್ದೇಶನ: ದರ್ಶನ್‌ ಶ್ರೀನಿವಾಸ್‌

ರೇಟಿಂಗ್: 3ಆರ್‌.ಕೆ

ಕೊಂದವರೇ ಕೊಲೆ ಮಾಡಿದವರನ್ನು ಕಂಡು ಹಿಡಿಯಲು ಬಂದರೆ ಹೇಗಿರುತ್ತದೆ ಎನ್ನುವುದಕ್ಕೆ ‘4 ಎನ್‌ 6’ ಸಿನಿಮಾ ನೋಡಬೇಕು. ಮರ್ಡರ್‌, ಥ್ರಿಲ್ಲರ್‌ ದಾರಿಯಲ್ಲಿ ಸಾಗುವ ಈ ಚಿತ್ರದ್ದು ಸೇಡು ಕೇಂದ್ರಬಿಂದು. ಪೊಲೀಸು, ಸಾವು ಮತ್ತು ಫೋರೆನ್ಸಿಕ್‌... ಇವಿಷ್ಟು ಅಂಶಗಳ ಸುತ್ತಲೇ ಇಡೀ ಸಿನಿಮಾ ಸಾಗುತ್ತದೆ. ನಿಧಾನಗತಿಯ ಥ್ರಿಲ್ಲಿಂಗ್‌ ಅನುಭವ ನೀಡುವ ಈ ಕತೆಯಲ್ಲಿ ಮೂರು- ನಾಲ್ಕು ಕೊಲೆ ನಡೆಯುವ ಹೊತ್ತಿಗೆ ಅಸಲಿ ವಿಷಯ ಆಚೆ ಬರುತ್ತದೆ.

ಯಾವುದೇ ಕ್ರೈಮ್‌ ನಡೆದಾಗ ಅಲ್ಲಿ ಫೋರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರ ಬಹು ಮುಖ್ಯವಾಗುತ್ತದೆ. ಸರಣಿ ಕೊಲೆಗಳು ನಡೆಯುತ್ತಿದ್ದಾಗ ಆ ಸಾವುಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡು ಹಿಡಿಯಲು ಒಬ್ಬ ಯಂಗ್‌ ಫೋರೆನ್ಸಿಕ್‌ ಡಿಟೆಕ್ಟಿವ್‌ ಬರುತ್ತಾರೆ. ಕೊಲೆ, ಆಸಕ್ಮಿಕ ಸಾವು ಎಂದು ತಳ್ಳಿ ಹಾಕುವ ಪ್ರತಿ ಸಾವಿನ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಹೇಳುವಷ್ಟು ಸಾಕ್ಷಿ-ಪುರಾವೆಗಳನ್ನು ಈ ಫೋರೆನ್ಸಿಕ್‌ ಅಧಿಕಾರಿ ಸಂಗ್ರಹಿಸುತ್ತಾರೆ. ಮುಂದೇನು, ಫೋರೆನ್ಸಿಕ್‌ ಅಧಿಕಾರಿಗೂ, ಈ ಸಾವುಗಳಿಗೂ ಸಂಬಂಧವೇನು ಎಂಬುದೇ ನಂತರದ ಕತೆ.

ಆದರೆ, ಇಬ್ಬರು ವೈದ್ಯರು, ಒಬ್ಬ ಲ್ಯಾಬ್‌ ಟೆಕ್ನಿಷಿಯನ್‌, ಮತ್ತೊಬ್ಬ ಫಾರ್ಮಸಿ ಮಾಲೀಕನ ಸಾವಿಗೂ ಬಾಲಕನೊಬ್ಬವನ ಸಾವಿಗೂ ಇರುವ ನಂಟು ಬಯಲು ಮಾಡುವುದು ಚಿತ್ರದ ಉದ್ದೇಶ. ಪೊಲೀಸ್‌ ಪಾತ್ರಧಾರಿಯಾಗಿ ಭವಾನಿ ಪ್ರಕಾಶ್‌, ಫೋರೆನ್ಸಿಕ್‌ ಡಿಟೆಕ್ಟಿವ್‌ ಆಗಿ ರಚನಾ ಇಂದರ್‌ ಪಾತ್ರಗಳು ಕತೆಗೆ ಪೂರಕವಾಗಿವೆ. ಥ್ರಿಲ್ಲಿಂಗ್‌ ಅನುಭವ ನೀಡುವ ಈ ಸಿನಿಮಾ ಪೂರ್ತಿ ಒಂದೇ ಘಟನೆ ಸುತ್ತ ಸಾಗುತ್ತದೆ.