ಸಾರಾಂಶ
ಇತ್ತೀಚೆಗೆ ಬಿಡುಗಡೆಯಾಗಿ ಹೆಸರು ಮಾಡಿರುವ ಬ್ಲಿಂಕ್ ಸಿನಿಮಾ 50 ದಿನ ಪೂರೈಸಿದೆ. ಇಲ್ಲಿಯವರೆಗಿನ ಒಟ್ಟು ಗಳಿಕೆ 88 ಲಕ್ಷ ರು.
ಕನ್ನಡಪ್ರಭ ಸಿನಿವಾರ್ತೆ
ವಿಭಿನ್ನ ಸಿನಿಮಾ ಎಂದು ಗುರುತಿಸಿಕೊಂಡಿರುವ ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರದ ಈವರೆಗಿನ ಒಟ್ಟು ಗಳಿಕೆ ರು.88 ಲಕ್ಷ ಎಂದು ನಿರ್ಮಾಪಕ ರವಿಚಂದ್ರ ತಿಳಿಸಿದ್ದಾರೆ. ಈ ಸಿನಿಮಾ 50 ದಿನ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಸಿನಿಮಾ ತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು.ನಿರ್ಮಾಪಕ ರವಿಚಂದ್ರ, ‘ಸಿನಿಮಾ ಒಳ್ಳೆಯ ಹೆಸರು ಮಾಡಿದ್ದಕ್ಕೆ, 50 ದಿನ ಪ್ರದರ್ಶನ ಕಂಡಿದ್ದಕ್ಕೆ ಖುಷಿ ಇದೆ. ಹಾಕಿರುವ ಬಂಡವಾಳ ಇನ್ನಷ್ಟೇ ವಾಪಾಸ್ ಬರಬೇಕಿದೆ. ಬಹುಶಃ ಡಬ್ಬಿಂಗ್ ಹಕ್ಕುಗಳು ಖರೀದಿಯಾದರೆ ಇದು ಸಾಧ್ಯವಾಗಬಹುದು’ ಎಂದಿದ್ದಾರೆ.
ದೀಕ್ಷಿತ್ ಶೆಟ್ಟಿ, ‘ಸಿನಿಮಾ 50 ದಿನ ಪೂರೈಸಿದೆ ಅನ್ನೋದನ್ನು ಇನ್ನೂ ನಂಬಲಿಕ್ಕಾಗ್ತಾ ಇಲ್ಲ. ಬೆಂಗಳೂರಿನಲ್ಲಿ ಕೇವಲ 8 ಥಿಯೇಟರ್‌ನಲ್ಲಿದ್ದ ಸಿನಿಮಾ 80 ಥಿಯೇಟರ್ ರೀಚ್ ಆಗಿದ್ದೇ ದೊಡ್ಡ ಕಥೆ. ಸಿನಿಮಾ 25 ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದಾಗಲೇ, 25 ದಿನ ಆಯ್ತಲ್ಲಾ, ಇನ್ನು ಸಾಕು, ನಿಲ್ಲಿಸಿಬಿಡಿ ಎಂಬ ಮಾತು ಕೇಳಿಬಂತು. ಆದರೆ ಆ ತೀರ್ಮಾನ ತಗೋಳೋರು ಪ್ರೇಕ್ಷಕರು. ನಾನು ಇನ್ನು ಮೇಲಿಂದ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಅಂತ ರಿಕ್ವೆಸ್ಟ್ ಮಾಡೋದನ್ನು ನಿಲ್ಲಿಸ್ತೀನಿ. ಬದಲಿಗೆ ಜನ ಥಿಯೇಟರ್‌ಗೆ ಬರುವಂಥಾ ಸಿನಿಮಾ ಮಾಡ್ತೀನಿ’ ಎಂದರು.ಚಿತ್ರಸಾಹಿತಿ ಪ್ರಮೋದ್ ಮರವಂತೆ ಹಾಗೂ ಚಿತ್ರತಂಡದವರು ಇದ್ದರು.